ಸಾರಾಂಶ
ಗುತ್ತಲ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವುದು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.
ತಾಲೂಕಿನ ಗುತ್ತಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆರ್‌ಟಿಇ ಕಾಯಿದೆ ಅಡಿಯಲ್ಲಿ ಉಚಿತ ಶಿಕ್ಷಣ, ಸರ್ಕಾರಿ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಏಕರೂಪ ಶಿಕ್ಷಣದ ಅವಕಾಶ ಕಲ್ಪಿಸಲು ಹಾಗೂ ಕುಟುಂಬಗಳ ಮೇಲೆ ಆರ್ಥಿಕ ಭಾರ ತಗ್ಗಿಸಲು ಉಚಿತ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡಲು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಉಚಿತ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶಿಷ್ಯವೇತನ ನೀಡಲಾಗುತ್ತಿದೆ ಹಾಗೂ ವಿಕಲಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣ ಯೋಜನೆ ಮೂಲಕ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.
ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಜಗದೀಶ ಹಂಡೇಗಾರ ಮಾತನಾಡಿ, ಶಾಲಾ ಆವರಣದಲ್ಲಿ ಕೈತೋಟ ಮಾಡಲಾಗುತ್ತಿದೆ. ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಮತ್ತು ಬಾಳೆ ಹಣ್ಣು ನೀಡುವ ಮೂಲಕ ಮಕ್ಕಳಿಗೆ ದೈಹಿಕ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.ಗುತ್ತಲ ಸಿಆರ್‌ಪಿ ಲೋಕೇಶ ವಡ್ಡರ ಇಲಾಖೆಯ ಎಲ್ಲ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ನರಸಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಗುತ್ತಲ ವಲಯದ ಶಿಕ್ಷಣ ಸಂಯೋಜಕ ಎಂ.ಎಫ್. ಭಗವಂತಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ವಿಜ್ಞಾನ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಎಂಪಿಎಸ್ ಗುತ್ತಲ ಶಾಲೆಯ ವಿದ್ಯಾರ್ಥಿ ವಸಂತ ಇಟಗಿ ವಿದ್ಯಾರ್ಥಿ ಪ್ರಥಮ, 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 95ರಷ್ಟು ಅಂಕ ಪಡೆದ ಗೌತಮಿ ಅಜ್ಜಪ್ಪ ಅಂಗೂರ, ಶೇ.93ರಷ್ಟು ಅಂಕ ಪಡೆದ ಹೇಮಾ ಆಳ್ಳಳ್ಳಿ ಅವರನ್ನು ಸನ್ಮಾನಿಸಲಾಯಿತು.ಮುಖ್ಯೋಪಾಧ್ಯಾಯ ರಮೇಶ ಭಜಂತ್ರಿ, ಗುತ್ತಲ ಹಾಗೂ ಹೊಸರಿತ್ತಿ ವಲಯದ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರುಗಳು, ಇ.ಸಿ.ಓಗಳಾದ ಓಂಪ್ರಕಾಶ ಯತ್ನಳ್ಳಿ, ಹನುಮಗೌಡ್ರ ಇಸಿಓ, ಬಿ.ಆರ್.ಪಿ ವಿಜಯಕುಮಾರ ಮತ್ತೂರು, ಶಿವಕುಮಾರ ಎಸ್ ಬಿ., ಪ್ರಶಾಂತ್ ಗುತ್ತಲಮಠ, ಮರೋಳ, ಪ್ರೋಗ್ರಾಮ್ ಕೋಆರ್ಡಿನೇಟರ್ ರಮೇಶ ಪೂಜಾರ, ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಅಡುಗೆ ಸಹಾಯಕರು ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿಆರ್‌ಪಿ ರಾಜು ಭಜ್ಜಿ ಸ್ವಾಗತಿಸಿದರು ಹಾಗೂ ಮೈತ್ರ ಪುಟ್ಟಮ್ಮನವರ ನಿರೂಪಿಸಿದರು.