ತುಮಕೂರಿನಲ್ಲಿ ನಾಳೆ ತಿರಂಗಾ ಯಾತ್ರೆ

| Published : May 17 2025, 01:50 AM IST

ಸಾರಾಂಶ

ದೇಶದ ಐಕ್ಯತೆಗಾಗಿ ರಾಷ್ಟ್ರಭಕ್ತಿ ಅನಾವರಣಗೊಳಿಸುವ ತಿರಂಗ ಯಾತ್ರೆಯನ್ನು ಮೇ 18ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿಧ ಸಮಾಜ, ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಪ್ರವಾಸಿಗರನ್ನು ಹತ್ಯೆ ಮಾಡಿದ ಪಾಕಿಸ್ತಾನಿ ಪ್ರಾಯೋಜಿತ ಉಗ್ರರಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ದೇಶದ ಐಕ್ಯತೆಗಾಗಿ ರಾಷ್ಟ್ರಭಕ್ತಿ ಅನಾವರಣಗೊಳಿಸುವ ತಿರಂಗ ಯಾತ್ರೆಯನ್ನು ಮೇ 18ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿಧ ಸಮಾಜ, ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ನಿರ್ದೇಶಕ ಜಿ.ಆರ್.ಸುರೇಶ್, ಪಹಲ್ಗಾಮ್ ಹತ್ಯೆ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಂಡು ಉಗ್ರರ ಹುಟ್ಟಡಗಿಸುವ ಕ್ರಮ ಕೈಗೊಂಡಿದೆ. ಪಾಕಿಸ್ತಾನದಲ್ಲಿರುವ 9 ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿದೆ ಎಂದರು. ಈ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ನೀಡಲು, ಭಾರತೀಯರೆಲ್ಲಾ ಒಂದಾಗಿ ದೇಶಭಕ್ತಿ ಪ್ರದರ್ಶಿಸುವ ಭಾವನಾತ್ಮಕ ಕಾರ್ಯಕ್ರಮವಾಗಿ ಮೇ 18 ರಂದು ನಗರದಲ್ಲಿ ಸಾವಿರಾರು ಜನರನ್ನೊಳಗೊಂಡ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಎಸ್‌ಐಟಿ ಕಾಲೇಜು ಮುಂಭಾಗದಿಂದ ಗಂಗೋತ್ರಿ ರಸ್ತೆ, ಎಸ್.ಎಸ್.ಪುರಂ ಮುಖ್ಯ ರಸ್ತೆ ಮೂಲಕ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದವರೆಗೆ ತಿರಂಗ ಯಾತ್ರೆ ನಡೆಯಲಿದೆ ಎಂದರು.ವಿವಿಧ ಮಠಾಧೀಶರು, ಚರ್ಚ್ ಪಾದ್ರಿಗಳು, ಮಸೀದಿ ಮೌಲ್ವಿಗಳು, ಶಾಸಕರು, ಸಂಸದರು ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಅಲ್ಲದೆ, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಜಿಲ್ಲಾ ವೈದ್ಯರ ಸಂಘ, ಜಿಲ್ಲಾ ವಕೀಲರ ಸಂಘ, ದಲಿತ ಸಂಘಟನೆಗಳು, ಆಟೋಚಾಲಕರ ಸಂಘ, ಸಹಕಾರಿ ಬ್ಯಾಂಕುಗಳು, ನಿವೃತ್ತ ಸೈನಿಕರ ಸಂಘ, ದಕ್ಷಿಣಕನ್ನಡ ಮಿತ್ರಬಳಗ ಸೇರಿದಂತೆ ಹಲವಾರು ಸಂಘಟನೆಗಳು, ನಾಗರೀಕ ಮುಖಂಡರು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ದೇಶ ಭಕ್ತಿ ಪ್ರದರ್ಶಿಸುವರು ಎಂದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಜಿಲ್ಲಾ ವೈದ್ಯರ ಸಂಘದ ಡಾ.ಕೆ.ಪಿ.ಸುರೇಶ್‌ಬಾಬು ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಜೈನ ಸಮಾಜದ ಆರ್.ಎ.ಸುರೇಶ್‌ಕುಮಾರ್, ಮರಾಠ ಸಮಾಜದ ಸುರೇಶ್‌ರಾವ್, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗರಾಜು, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ್, ಮೈತ್ರಿ ಸಂಘಟನೆಯ ಗಂಗಾ ಪರಮೇಶ್, ಸುಧಾ ಶಶಿಕುಮಾರ್, ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ, ನೇಕಾರರ ಸಮಾಜದ ರಾಮಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.