ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಿರಂತರ ಅಧ್ಯಯನವು ವಿದ್ಯಾರ್ಥಿಗಳ ಬೆಳವಣಿಗೆಯನ್ನು ನಿರ್ಧರಿಸುತ್ತದೆ ಎಂದು ಬೆಂಗಳೂರಿನ ಅಮರರಾಜ ಎಲೆಕ್ಟ್ರಾನಿಕ್ಸ್ ಮುಖ್ಯ ಹಣಕಾಸು ಅಧಿಕಾರಿ ಷಣ್ಮುಕ ರಾವ್ ಗೊರು ತಿಳಿಸಿದರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಬಿಝಟೆಕ್ ಎಕ್ಸ್ಟ್ರಾವೆಗಾನ್ಝಾ- ವಿದ್ವತ್- 2025 ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬೇಕಾದರೇ ಮೊದಲು ತಮ್ಮ ಗುರಿಯನ್ನು ನಿರ್ಧಾರ ಮಾಡಬೇಕು. ತಾವು ಏನಾಗಬೇಕೆಂಬುದು ಅವರ ನಿರ್ಧಾರವೇ ಆಗಿರುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಸದಾ ಸತತ ಪ್ರಯತ್ನದಲ್ಲಿ ತೊಡಗಿರಬೇಕು. ಅದು ಅವರ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಎಂದರು.
ವಿದ್ವತ್ ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧೆಗಳು ಇರುವುದರಿಂದ ಅದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ತೋರ್ಪಡಿಸಬೇಕಾಗುತ್ತದೆ. ನೀವು ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು. ಸಂವಹನ ಕೌಶಲವೆಂದರೆ ಕೇವಲ ಮಾತನಾಡುವುದಲ್ಲ. ನಮ್ಮ ಅಧ್ಯಯನ, ನಾವು ಹೇಗೆ ವಿವರಿಸಬೇಕು ಎಂಬ ಜ್ಞಾನ, ಇತರರಿಗೆ ಹೇಗೆ ಅರ್ಥಮಾಡಿಸಬೇಕು ಎಂಬುದು ಸಂವಹನ ಕೌಶಲವೇ ಆಗಿದೆ ಎಂದರು.ವಿದ್ಯಾರ್ಥಿಗಳು ಐದು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುರಿ, ಪ್ರಯತ್ನ, ನಿರಂತರ ಕೆಲಸ, ಸತತ ಅಭ್ಯಾಸ, ವಿಫಲಗಳ ಬಗ್ಗೆ ಯೋಚಿಸದೇ ಇರುವುದು. ಇವುಗಳ ಅಳವಡಿಕೆಯಿಂದ ನೀವು ಏನನ್ನಾದರೂ ಸಾಧಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ವಂತ್ ನಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಬರುತ್ತದೆ. ಈ ಕಾರ್ಯಕ್ರಮವು ಮೊದಲು ಕಾಲೇಜು ಮಟ್ಟದಲ್ಲಿದ್ದು, ನಂತರ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಬೆಳೆದು ಈಗ ರಾಜ್ಯ ಮಟ್ಟಕ್ಕೆ ಬಂದು ನಿಂತಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರ ತರಲು ನಾವು ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ. ವಿಶ್ವನಾಥ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ. ನಾಗರಾಜು, ವಿದ್ವತ್ ಸಂಚಾಲಕಿ ಎನ್. ಗೀತಾ, ಅಧ್ಯಾಪಕ ಸಂಯೋಜಕರಾದ ಎಂ.ಟಿ. ಶ್ರುತಿ, ವಿ. ಚಂದನ್ ಇದ್ದರು. ಸುಶ್ಮಿತಾ ಪ್ರಾರ್ಥಿಸಿದರು. ಡಿ.ಆರ್. ಕಿರಣ ನಿರೂಪಿಸಿದರು. ಸುಹೇಬಿಯಾ ಸ್ವಾಗತಿಸಿದರು. ಮೊಹಮ್ಮದ್ ಸಫ್ರೀದ್ ವಂದಿಸಿದರು.
ನಾವು ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಿ ಯಶಸ್ವಿಯಾಗಲು ಹಣಕಾಸಿನ ಹೂಡಿಕೆ ಮತ್ತು ಅದರಿಂದ ಲಾಭವನ್ನು ಪಡೆಯುವುದು ಬಹಳ ಮುಖ್ಯ. ನಿಮ್ಮ ಅಧ್ಯಯನದ ಬಗ್ಗೆ ನಿಮಗೆ ಸದಾ ಆಸಕ್ತಿ ಇರಬೇಕು. ಇದು ನಿಮಗೆ ಹೊಸ ಅನುಭವವನ್ನು ತಂದು ಕೊಡುತ್ತದೆ ಮತ್ತು ಮುಂದಿನ ಭವಿಷ್ಯಕ್ಕೆ ಪ್ರೇರಣೆಯಾಗುತ್ತದೆ.- ಪಿ.ವಿಶ್ವನಾಥ್, ಕಾರ್ಯದರ್ಶಿ, ವಿದ್ಯಾವರ್ಧಕ ಸಂಘ