ಸಾರಾಂಶ
ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಆರೈಕೆ ಮತ್ತು ಹಿತರಕ್ಷಣೆ ಕೈಗೊಳ್ಳಲಾಗುತ್ತದೆ. ಸದ್ಯ ಬಾಲಮಂದಿರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಇದನ್ನು ಗಮನಿಸಿ ಸರ್ಕಾರ 2 ಬಾಲ ಮಂದಿರ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಿ ಮಂಜುರಾತಿ ಆದೇಶ ನೀಡಿದೆ.
ಕೊಪ್ಪಳ:
ತಾಲೂಕಿನ ಟಣಕನಕಲ್ಲನಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಮಿಷನ್ ವಾತ್ಸಲ್ಯದಡಿ ನಿರ್ಮಿಸುತ್ತಿರುವ ಮಕ್ಕಳ ಪಾಲನಾ ಕೇಂದ್ರಗಳಾದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರ ಕಟ್ಟಡ ನಿರ್ಮಾಣ ಸ್ಥಳಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಭೇಟಿ ನೀಡಿ ಪರಿಶೀಲಿಸಿದರು.ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಆರೈಕೆ ಮತ್ತು ಹಿತರಕ್ಷಣೆ ಕೈಗೊಳ್ಳಲಾಗುತ್ತದೆ. ಸದ್ಯ ಬಾಲಮಂದಿರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಇದನ್ನು ಗಮನಿಸಿ ಸರ್ಕಾರ 2 ಬಾಲ ಮಂದಿರ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಿ ಮಂಜುರಾತಿ ಆದೇಶ ನೀಡಿದೆ.
ಶಿಲಾನ್ಯಾಸವಾಗಿ ವರ್ಷ ಕಳೆದರೂ ಕಟ್ಟಡ ಬುನಾದಿಯಿಂದ ಮೇಲೆ ಬಂದಿಲ್ಲ. ಜತೆಗೆ ಬಾಲಕಿಯರ ಬಾಲಮಂದಿರ ನಿರ್ಮಾಣ ಕಾರ್ಯ ಆರಂಭಿಸದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಮತ್ನಾಳ, ಶೀಘ್ರ ಕಾಮಗಾರಿ ಆರಂಭಿಸಬೇಕೆಂದು ಕೊಪ್ಪಳ ನಿರ್ಮಿತಿ ಕೇಂದ್ರದ ಸಹಾಯಕ ಅಭಿಯಂತರರಿಗೆ ಸೂಚಿಸಿದರು. ತಪ್ಪಿದಲ್ಲಿ ನಿರ್ಮಾಣ ಕಾಮಗಾರಿ ಗುತ್ತಿಗೆ ರದ್ದುಪಡಿಸಿ, ಬೇರೆ ಸಂಸ್ಥೆಗೆ ನೀಡುವಂತೆ ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ಎಚ್ಚರಿಸಿದರು.ಕಟ್ಟಡಕ್ಕೆ ನೀರಿನ ಸೌಲಭ್ಯ ಕಲ್ಪಿಸುವಂತೆ ತಾಪಂ ಇಒಗೆ ಸೂಚಿಸಿದ ಅವರು, ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿ ನೀಡಿರುವ ಭೂವಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಹೆಸರಿನಲ್ಲಿದೆ. ಕೇಂದ್ರ ಕಚೇರಿ ಸುತ್ತೋಲೆಯಂತೆ ಈ ಜಮೀನನ್ನು ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಹೆಸರಿನಲ್ಲಿ ವರ್ಗಾಯಿಸುವಂತೆ ತಹಸೀಲ್ದಾರ್‌ಗೆ ತಿಳಿಸಿದರು.
ಈ ವೇಳೆ ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಓಜನಹಳ್ಳಿ ಗ್ರಾಪಂ ಅಧ್ಯಕ್ಷ ಹುಚ್ಚಪ್ಪ ಭೋವಿ, ಕೊಪ್ಪಳ ನಿರ್ಮಿತಿ ಕೇಂದ್ರದ ಸಹಾಯಕ ಅಭಿಯಂತರರು, ಓಜನಹಳ್ಳಿ ಪಿಡಿಒ ಶಿವಬಸಪ್ಪ ಉಪಸ್ಥಿತರಿದ್ದರು.