ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಹೊರವಲಯದ ಉಳಾಯಿಬೆಟ್ಟಿನಲ್ಲಿ ಶುಕ್ರವಾರ ರಾತ್ರಿ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣದ ತನಿಖೆಯನ್ನು ಪೊಲೀಸ್ ಇಲಾಖೆ ವಿವಿಧ ಆಯಾಮಗಳಲ್ಲಿ ಚುರುಕುಗೊಳಿಸಿದ್ದು, ಇದಕ್ಕಾಗಿ ಮೂರು ತಂಡಗಳನ್ನು ರಚನೆ ಮಾಡಿದೆ. ಈ ಕೃತ್ಯವನ್ನು ಮನೆಯ ಸಂಪೂರ್ಣ ವಿವರ ಗೊತ್ತಿರುವವರೇ ಮಾಡಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆದಿದೆ.ಪ್ರತಿ ತನಿಖಾ ತಂಡವೂ ಭಿನ್ನ ಆಯಾಮದಲ್ಲಿ ತನಿಖೆ ನಡೆಸುತ್ತಿದೆ. ಒಂದು ತಂಡ ಈ ಮಾದರಿಯ ಕೃತ್ಯಗಳು, ಅವುಗಳಲ್ಲಿ ಭಾಗಿಯಾದವರ ಬಗ್ಗೆ ತನಿಖೆ ನಡೆಸುತ್ತಿದ್ದರೆ, ಇನ್ನೊಂದು ತಂಡ ಗುತ್ತಿಗೆದಾರರ ಕಾರ್ಮಿಕರ ಮಾಹಿತಿ ಕಲೆ ಹಾಕುತ್ತಿದೆ. ಮೂರನೇ ತಂಡ ಮೊಬೈಲ್ ಸಿಡಿಆರ್ ಹಾಗೂ ವಾಹನ ತೆರಳಿದ ಸಿಸಿ ಟಿವಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಮನೆಯ ಸಿಸಿ ಕ್ಯಾಮರಾ ಫೂಟೇಜ್‌ಗಳು, ಅಲ್ಲಿದ್ದ ಮೊಬೈಲ್ ಲೊಕೇಶನ್‌ಗಳು, ಮನೆಯೊಳಗೆ ಆರೋಪಿಗಳು ಬಳಸಿದ ಮಾಸ್ಕ್, ಗ್ಲೌಸ್, ಕಂಪೌಂಡ್ ಗೋಡೆ ಮೂಲಕ ಹಾರಿದ ಹೆಜ್ಜೆ ಗುರುತು ದಾಖಲೆಗಳು ದೊರೆತಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಪ್ರಮುಖ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.ಪದ್ಮನಾಭ ಕೋಟ್ಯಾನ್ ಅವರ ಮನೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡೇ ಕೃತ್ಯ ಎಸಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೋಟ್ಯಾನ್ ಮನೆ ಗೇಟ್ ರಿಮೋಟ್ ಚಾಲಿತವಾಗಿದ್ದು, ರಾತ್ರಿ 8.30ರೊಳಗೆ ಬಂದ್ ಆಗುತ್ತದೆ. ನಂತರ ಮನೆಯ ಶ್ವಾನವನ್ನು ಗಸ್ತು ಕಾಯಲು ಬಿಡುತ್ತಾರೆ. ಇದೆಲ್ಲ ಗಮನಿಸಿ ಆರೋಪಿಗಳು ನಾಯಿಯನ್ನು ಹೊರ ಬಿಡುವ ಮೊದಲೇ ಮನೆಯೊಳಗೆ ಹೋಗಿ ದರೋಡೆ ಕೃತ್ಯ ಎಸಗಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ.
ದರೋಡೆಕೋರರು ಹಿಂದಿ, ಇಂಗ್ಲಿಷ್ ಮಾತನಾಡುತ್ತಿದ್ದು, ಅಸ್ಪಷ್ಟವಾಗಿತ್ತು. ಮಾತ್ರವಲ್ಲದೆ ಕರಾವಳಿ ಭಾಷೆಯ ಧಾಟಿಯೇ ಅದರಲ್ಲಿತ್ತು ಎನ್ನುವುದನ್ನು ಮನೆಮಂದಿ ಗುರುತಿಸಿದ್ದಾರೆ.ಏನಾಗಿತ್ತು?: ಉಳಾಯಿಬೆಟ್ಟು ಪೆರ್ಮಂಕಿ ಪದವಿನಲ್ಲಿರುವ ಪದ್ಮನಾಭ ಕೋಟ್ಯಾನ್ ಅವರು ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದಾಗ 9 ಮಂದಿಯ ತಂಡ ಮನೆ ಕಂಪೌಂಡ್ ಹಾರಿ ಒಳನುಗ್ಗಿದೆ. ಕೋಟ್ಯಾನ್ ಮೇಲೆ ತಂಡ ಏಕಾಏಕಿ ದಾಳಿ ಮಾಡಿ ಚೂರಿಯಿಂದ ಇರಿದು ಗಾಯಗೊಳಿಸಿದೆ. ಬಳಿಕ ಮನೆಯೊಳಗೆ ನುಗ್ಗಿ ಕೋಟ್ಯಾನ್ ಅವರ ಪತ್ನಿ ಶಶಿಪ್ರಭಾ ಅವರನ್ನು ಕಂಬಕ್ಕೆ ಕಟ್ಟಿ ಹಾಕಿ, ಪುತ್ರ ಪ್ರಥಮ್ ಮೇಲೂ ಹಲ್ಲೆಗೆ ಯತ್ನಿಸಿ ಚೂರಿಯಿಂದ ಬೆದರಿಸಿ ಕಪಾಟಿನ ಕೀ ಪಡೆದು ಚಿನ್ನಾಭರಣ, ನಗದನ್ನು ದೋಚಿದ್ದಾರೆ. ಬಳಿಕ ಕೋಟ್ಯಾನ್ ಅವರ ಫಾರ್ಚೂನರ್ ಕಾರನ್ನು ಸುಮಾರು 1 ಕಿ.ಮೀ. ದೂರ ಕೊಂಡೊಯ್ದು ರಸ್ತೆ ಬದಿ ನಿಲ್ಲಿಸಿ, ಬೇರೆ ಕಾರಿನಲ್ಲಿ ದರೋಡೆಕೋರರು ಪರಾರಿಯಾಗಿದ್ದರು.