ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ ಅನಧಿಕೃತವಾಗಿ ಜೆಸಿಬಿ ಮೂಲಕ ನೆಲಬಗೆದು ಕೇಬಲ್ ನೆಟ್ ವರ್ಕ್ ಕಾಮಗಾರಿ ನಿರ್ವಹಿಸುತ್ತಿರುವ ಪರಿಣಾಮ ರಸ್ತೆ ಪಕ್ಕದಲ್ಲಿನ ತುಂಗಭದ್ರಾ ಕುಡಿಯುವ ನೀರು ಸರಬರಾಜಿನ ಮುಖ್ಯ ಪೈಪ್ ಹಾಗೂ ಪಂಪ್ ಸೆಟ್ ಸಾಮಗ್ರಿಗಳು ಹಾಳಾಗಿವೆ ಈ ಕುರಿತು ಕಾಮಗಾರಿ ನಿಲ್ಲಿಸಲು ಹೋದ ಅಧಿಕಾರಿಗಳ ಮೇಲೆ ಗುತ್ತಿಗೆದಾರರು ದರ್ಪ ತೋರಿದ್ದು ಅವರನ್ನು ಎದುರಿಸಲು ಸರ್ಕಾರಿ ಅಧಿಕಾರಿಗಳು ಪೊಲೀಸರ ಮೋರೆ ಹೋದ ಅಪರೂಪದ ಘಟನೆ ಪಾವಗಡ ತಾಲೂಕಿನಲ್ಲಿ ನಡೆದಿದೆ.
ಆಗಿದ್ದೇನು ?ಪಾವಗಡದಿಂದ ಕಲ್ಯಾಣದುರ್ಗ ಹಾಗೂ ಪಟ್ಟಣದಿಂದ ಕೊಡಮಡಗು ಗ್ರಾಮದ ಆಂಧ್ರದ ಗಡಿಗೆ ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದರಿಂದ ಜೆಸಿಬಿಗಳಲ್ಲಿ ಆಳಕ್ಕೆ ನೆಲ ಅಗೆದು ಕೇಬಲ್ ನೆಟ್ ವರ್ಕ್ ಕಾಮಗಾರಿ ನಿರ್ವಹಿಸುತ್ತಿದ್ದು, ಇಲ್ಲಿನ ಕಡಮಲಕುಂಟೆ ಸಮೀಪ ಮನೆಮನೆಯ ಕುಡಿಯುವ ನೀರಿಗೆ ಆಳವಡಿಸಿದ್ದ ಬೃಹತ್ ಗಾತ್ರದ ಪೈಪ್ ಹಾಗೂ ಇತರೇ ಪಂಪ್‌ಸೆಟ್ ಸಾಮಗ್ರಿಗಳು ಹಾಳಾಗಿವೆ. ಡಿಸೆಂಬರ್ ಅಂತ್ಯದಲ್ಲಿ ತುಂಗಭದ್ರಾ ಕುಡಿಯುವ ನೀರು ಸರಬರಾಜ್‌ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವ ಸಾಧ್ಯತೆಗಳಿದ್ದು ಇಂತಹ ಪರಿಸ್ಥಿತಿಯಲ್ಲಿ ಕಾಮಗಾರಿ ನಿರ್ವಹಣೆ ವೇಳೆ ಕುಡಿಯುವ ನೀರು ಟ್ಯಾಂಕ್ ಸಂಪರ್ಕದ ಮುಖ್ಯ ಲೈನ್‌ನ ಪೈಪ್‌ಗಳನ್ನು ಹಾಳು ಮಾಡುತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪೂಜಾರಪ್ಪ ಕಂಪನಿಯ ಗುತ್ತಿಗೆದಾರರ ವಿರುದ್ಧ ಕಿಡಿಕಾರಿದರು. ರೈತರ ಹಾಗೂ ಮಾಧ್ಯಮಗಳಿಂದ ವಿಷಯ ಅರಿತ ಲೋಕೋಪಯೋಗಿ ಹಾಗೂ ಜಿಪಂ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಗೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಬೆಲೆ ನೀಡದ ಗುತ್ತಿಗೆದಾರರು ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ರೋಸಿ ಹೋದ ಅಧಿಕಾರಿಗಳು ಕಾಮಗಾರಿ ನಿಲ್ಲಿಸಲು ಪೊಲೀಸರ ಮೊರೆ ಹೋಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನೂ ಯಾರಾದರೂ ಬೆಳಿಗ್ಗೆ ವೇಳೆ ವಿಚಾರಿಸಲು ಹೋದರೆ ಸ್ಥಳಕ್ಕೆ ಹೋದರೆ ಕಾಮಗಾರಿ ನಿರ್ವಹಣೆಯ ವ್ಯಕ್ತಿಗಳೇ ಅಲ್ಲಿ ಇರುವುದಿಲ್ಲ. ಜೆಸಿಬಿ ಯಂತ್ರಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗುತ್ತಾರೆ. ಇದರ ಬಗ್ಗೆ ಸೂಕ್ತ ಮಾಹಿತಿ ನೀಡುವವರೆ ಇಲ್ಲ ರೈತ ಸಂಘ ಆರೋಪಿಸಿದೆ. ಒಟ್ಟಿನಲ್ಲಿ ಅಧಿಕಾರಿಗಳೇ ಕೈ ಚೆಲ್ಲಿದ್ದು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಸಹ ಹಿಂದೇಟು ಹಾಕುವಂತ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೋಟ್ 1ಒಎಫ್‌ಸಿ ಕೇಬಲ್ ಅಳವಡಿಕೆ ಹಿನ್ನೆಲೆಯಲ್ಲಿ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿ 48ರ ರಸ್ತೆಯ ಪಕ್ಕದಲ್ಲಿ ನೆಲ ಬಗೆದು ಹಾಳು ಮಾಡುತ್ತಿದ್ದು ಯಾವುದೇ ಅನುಮತಿ ಪಡೆಯದೇ ಕಾನೂನು ಬಾಹೀರವಾಗಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಕಾಮಗಾರಿ ನಿಲ್ಲಿಸಲು ಹೋದರೆ, ನಮ್ಮ ಮೇಲೆಯೇ ದೌರ್ಜನ್ಯಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ರಸ್ತೆ ಹಾಳಾಗುತ್ತಿದ್ದು ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಸರ್ಕಾರ ಹಾಗೂ ಸಾರ್ವಜನಿಕ ಆಸ್ತಿ ನಷ್ಟದ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ದೂರು ಸಲ್ಲಿಸಿ ಸ್ವೀಕೃತಿ ಪಡೆಯಲಾಗಿದೆ. - ಎಇಇ ಅನಿಲ್‌ಕುಮಾರ್, ಲೋಕೋಪಯೋಗಿ ಇಲಾಖೆ
ಕೋಟ್ 2ತಾಲೂಕಿನ ಕೊಡಮಡಗು ಗ್ರಾಪಂ ಕಡಮಲಕುಂಟೆ ವ್ಯಾಪ್ತಿಯಲ್ಲಿ ತುಂಗಭದ್ರಾ ಯೋಜನೆ ಪೈಪ್ ಡ್ಯಾಮೇಜ್ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಕಾಮಗಾರಿ ನಿಲ್ಲಿಸುವಂತೆ ಕೇಬಲ್ ನೆಟ್ ವರ್ಕ್ ಜೆಸಿಬಿಯ ಮಾಲೀಕರಿಗೆ ಸೂಚಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸಲು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುವುದು. - ಬಸವಲಿಂಗಪ್ಪ, ಜೆಇ, ಜಿಪಂ.