ಸಾರಾಂಶ
ಗುತ್ತಿಗೆದಾರರು ಯಾವುದೇ ಪಕ್ಷಕ್ಕೆ ಸೀಮಿತಗೊಳ್ಳದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದರೆ ಸಂಘದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘಟನೆ ಬಲಪಡಿಸಲು ಶ್ರಮಿಸಬೇಕು. ಅಂದಾಗ ಮಾತ್ರ ಸರ್ಕಾರಗಳಿಂದ ನ್ಯಾಯ ಪಡೆದುಕೊಳ್ಳಲು ಸಾಧ್ಯ ಎಂದು ಮುಖಂಡ ವೆಂಕನಗೌಡ ಪಾಟೀಲ ಹೇಳಿದರು.
ಮುದ್ದೇಬಿಹಾಳ : ದೇಶದಲ್ಲಿ ಉತ್ತರ ಭಾರತಕ್ಕೆ, ರಾಜ್ಯದಲ್ಲಿ ದಕ್ಷಿಣ ಭಾಗಕ್ಕೆ ಸೀಮಿತವಾಗಿ ರಾಜಕೀಯ ನಡೆಯುತ್ತಿದೆ. ಆದರೆ, ದಕ್ಷಿಣ ಭಾರತ ಮತ್ತು ಉತ್ತರ ಕರ್ನಾಟಕ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿವೆ.
ಗುತ್ತಿಗೆದಾರರು ಯಾವುದೇ ಪಕ್ಷಕ್ಕೆ ಸೀಮಿತಗೊಳ್ಳದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದರೆ ಸಂಘದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘಟನೆ ಬಲಪಡಿಸಲು ಶ್ರಮಿಸಬೇಕು. ಅಂದಾಗ ಮಾತ್ರ ಸರ್ಕಾರಗಳಿಂದ ನ್ಯಾಯ ಪಡೆದುಕೊಳ್ಳಲು ಸಾಧ್ಯ ಎಂದು ಮುಖಂಡ ವೆಂಕನಗೌಡ ಪಾಟೀಲ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಭವನದಲ್ಲಿ ಬುಧವಾರ ನಡೆದ ತಾಲೂಕು ಗುತ್ತಿಗೆದಾರ ಸಂಘದ ಪೂರ್ವಭಾವಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಸರ್ಕಾರದ ಕೆಲಸವನ್ನು ಗುತ್ತಿಗೆ ಪಡೆದು ಕೆಲಸ ಮಾಡಿದರೂ ಕಳೆದ ಎರಡು ಮೂರು ವರ್ಷಗಳಿಂದ ಕೆಲಸ ಮಾಡಿದ ಬಾಕಿ ಹಣ ಪಾವತಿ ಮಾಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ವಿರೋಧ ಪಕ್ಷದವರು ತಮ್ಮ ತಮ್ಮ ರಾಜಕೀಯ ಅಧಿಕಾರಕ್ಕಾಗಿ ಪೈಪೋಟಿಯಲ್ಲಿ ತೊಡಗಿದ್ದಾರೆ. ಗುತ್ತಿಗೆದಾರರ ಸಮಸ್ಯೆ ಬಗೆಹರಿಸುವ ಬಗ್ಗೆ ಯಾರ ಪಕ್ಷದವರು ತಲೆಕೆಡಿಸಿಕೊಂಡಿಲ್ಲ. ರಾಜ್ಯಾದ್ಯಂತ ಸಂಘಟನಾ ಶಕ್ತಿ ಹೆಚ್ಚಿಸಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಂಡು ಸರ್ಕಾರದ ಕಣ್ಣು ತೆರೆಸಬೇಕು ಎಂದರು.
ಈ ವೇಳೆ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅರುಣ ಮಠ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸರ್ಕಾರದಿಂದ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೊಳಿಸಿಲ್ಲ. ಫೆ.14 ರಂದು ವಿಜಯಪುರದಲ್ಲಿ ಜಿಲ್ಲಾ ಗುತ್ತಿಗೆದಾರ ಸಂಘದಿಂದ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿದೆ. ನಮ್ಮ ಹೋರಾಟ ಯಾವುದೇ ಸರ್ಕಾರದ, ಪಕ್ಷದ, ಶಾಸಕರ, ಮಂತ್ರಿಗಳ ವಿರುದ್ಧವಾಗಿ ಹೋರಾಟ ನಡೆಸುತ್ತಿಲ್ಲ. ರಾಜ್ಯದ ಗುತ್ತಿಗೆದಾರರು ಬ್ಯಾಂಕ್‌ನಲ್ಲಿ ಸಾಲ ಪಡೆದು, ಹೊರಸಾಲ ಪಡೆದು ಗುತ್ತಿಗೆ ಪಡೆದ ಕಾಮಗಾರಿಗಳನ್ನು ಮಾಡಿದ್ದೇವೆ. ಅಧಿಕಾರಿಗಳು ಸಮರ್ಪಕವಾಗಿ ನಮಗೆ ಸ್ಪಂದಿಸುತ್ತಿಲ್ಲ. ಬಾಕಿ ಹಣ ಪಾವತಿ ಮಾಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ಸೇರಿದಂತೆ ಸಾವಿರಾರು ಜನ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ನಮಗೆ ನ್ಯಾಯ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ಗುತ್ತಿಗೆದಾರರು ಯಾವ ಜಾತಿ ಪಕ್ಷಕ್ಕೆ ಸೀಮಿತವಾದವರಲ್ಲ ಯಾರೆ ಅಧಿಕಾರದಲ್ಲಿರೂ ಸಹ ಟೆಂಡರ್ ಮೂಲಕ ಕಾಮಗಾರಿ ಪಡೆದು ಕೆಲಸ ಮಾಡುತ್ತೇವೆ. ಜಿಲ್ಲಾ ಗುತ್ತಿಗೆದಾರರು ಸಂಘದ ಬಲವರ್ಧನೆಗೆ ಪ್ರಾಮಾಣಿಕವಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಜತೆಗೆ ಒಂದು ಕೋಟಿಯ ಕಾಮಗಾರಿಗೆ ಆಯಾ ತಾಲೂಕಿನ ಜನರಿಗೆ ಅವಕಾಶ ನೀಡುವಂತೆ ಮಾಡಿದರೆ ಅಲ್ಲಿಯ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರು ಕೆಲಸ ಮಾಡಿ ಜೀವನ ನಡೆಸಿಕೊಂಡು ಹೋಗುತ್ತಾರೆ. ವಿಜಯಪುರ ನಗರದಲ್ಲಿ ಜಿಲ್ಲಾ ಹೋರಾಟಕ್ಕೆ ತಾಲೂಕಿನಿಂದ ಸುಮಾರು 500 ಜನ ಗುತ್ತಿಗೆದಾರರು, ಕಾರ್ಮಿಕರನ್ನು ಕರೆತರಲಾಗುವುದು ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಅರುಣ ಮಠ, ಜಿಲ್ಲಾ ಅಧ್ಯಕ್ಷ ಸಿ.ಆರ್.ರೂಢಗಿ, ಕಾರ್ಯದರ್ಶಿ ಎಂ.ಪಟ್ಟಣಶೇಟ್ಟಿ, ಎಸ್.ಐ.ಡೋರಣಮಡ, ಆರ್.ಎಮ್.ಮಾವಿನಗಿಡ, ಜಯಂತ ಕೊಲ್ಲೂರ, ಆರ್.ಬಿ.ಅಸ್ಕಿ, ಸುಜಿತ್ ಬಿಂಜಲಭಾವಿ, ಮೋಹನ ರಾಠೋಡ, ಮುತ್ತಿನಶೆಟ್ಟಿ ಗೂಳಿ, ಯಲ್ಲಪ್ಪ ಚಲವಾದಿ, ರುದ್ರಗೌಡ ಅಂಗಡಗೇರಿ ಸೇರಿದಂತೆ ಹಲವರು ಇದ್ದರು.