ಸಾರಾಂಶ
ಸಂಪೂರ್ಣ ಶಿಕಾರಿಪುರ ತಾಲೂಕನ್ನು ಮಾದರಿ ರೀತಿಯಲ್ಲಿ ನಿರ್ಮಿಸುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿಗೆ ಸಹಕಾರ ನೀಡಿದ್ದು ತಾಲೂಕಿನ ಗುತ್ತಿಗೆದಾರರು ಎಂದು ಸಂಸದ ಬಿವೈ. ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸಂಪೂರ್ಣ ಶಿಕಾರಿಪುರ ತಾಲೂಕನ್ನು ಮಾದರಿ ರೀತಿಯಲ್ಲಿ ನಿರ್ಮಿಸುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿಗೆ ಸಹಕಾರ ನೀಡಿದ್ದು ತಾಲೂಕಿನ ಗುತ್ತಿಗೆದಾರರು ಎಂದು ಸಂಸದ ಬಿವೈ. ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.ಗುರುವಾರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿನ ಸೂರಜ್ ರೈಸ್ ಮಿಲ್ ಸಮೀಪ ಲೋಕೋಪಯೋಗಿ ಗುತ್ತಿಗೆದಾರರ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಸರ್ಕಾರಗಳು ಬದಲಾಗಬಹುದು, ಅಧಿಕಾರಗಳು ಬದಲಾಗಬಹುದು, ಆದರೆ ಗುತ್ತಿಗೆದಾರರು ಮತ್ತು ಸರ್ಕಾರದ ನಡುವೆ ನಾವು ಎಂದಿಗೂ ಸೇತುವೆ ರೀತಿಯಲ್ಲಿ ಬೆನ್ನೆಲುಬಾಗಿ ನಿಂತು ಗುತ್ತಿಗೆದಾರರ ಹಿತವನ್ನು ಕಾಪಾಡಿದ್ದೇವೆ. ಮುಂದೆಯೂ ಕಾಪಾಡುತ್ತೇವೆ ಎಂದು ಭರವಸೆ ನೀಡಿದ ಅವರು, ಸ್ಥಳೀಯ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮೂಲಕ ರಾಜ್ಯದಲ್ಲಿ ಶಿಕಾರಿಪುರ ಮಾದರಿ ತಾಲೂಕಾಗಿ ಗುರುತಿಸಿಕೊಳ್ಳುವಂತೆ ಮಾಡಿದ ಕೀರ್ತಿಯಲ್ಲಿ ಪಾಲುದಾರರಾಗಿರುತ್ತೀರಿ ಎಂದು ಶ್ಲಾಘಿಸಿದರು.ಎಸ್ ಆರ್ ದರಕ್ಕಿಂತ ಕಡಿಮೆ ದರಕ್ಕೆ ಟೆಂಡರ್ ಹಾಕದೆ, ಉತ್ತಮ ಗುಣಮಟ್ಟದ ಕಡೆಗೆ ಗಮನಹರಿಸಿ ಸರ್ಕಾರದ ಹಣ ಪೋಲಾಗದಂತೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿ ಎಂದು ಕಿವಿ ಮಾತು ಹೇಳಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಮಾತನಾಡಿ, ಗುತ್ತಿಗೆದಾರರಿಗೆ ಜಾತಿಭೇದ, ಲಿಂಗ ಭೇದ, ಧರ್ಮಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಅವರವರ ಸಾಮರ್ಥ್ಯಕ್ಕನುಗುಣವಾಗಿ ವಹಿಸಿದ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ವಹಣೆ ಮಾಡಿದ್ದು ಶ್ಲಾಘನೀಯ. ಕಾಮಗಾರಿ ಉತ್ತಮವಾದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಕಳಪೆಯಾದಾಗ ಕಿವಿ ಹಿಂಡಿ ಕೆಲಸ ಮಾಡಿಸಿದ ನಿದರ್ಶನಗಳು ಇವೆ. ಪ್ರತಿ ಬಾರಿ ಸ್ಪಂದಿಸಿದ ಗುತ್ತಿಗೆದಾರರು ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು. ಇದಕ್ಕೆ ಸಹಕರಿಸಿದ ಎಲ್ಲ ಇಂಜಿನಿಯರ್ ಸಹ ಅಭಿನಂದನಾರ್ಹರು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಎಲ್ ನಿಂಗಪ್ಪ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ನಿವೃತ್ತ ಕಾರ್ಯ ಪಾಲಕ ಅಭಿಯಂತರ ಎಸ್.ರ ಮೇಶ್, ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ ಪಾಟೀಲ್, ಕೆ. ಚಂದ್ರಶೇಖರಪ್ಪ, ಬಿಎಚ್. ಬಸವರಾಜಪ್ಪ, ಗೌರವಾಧ್ಯಕ್ಷ ಎಚ್ಆರ್. ಯೋಗೇಶಪ್ಪ, ಸಂಘಟನಾ ಕಾರ್ಯದರ್ಶಿ ಗಜೇಂದ್ರ ನಾಯ್ಕ, ಸಿ.ಎಸ್ ಜಯರಾಜ್, ಓಂಕಾರಪ್ಪ, ಲಕ್ಷ್ಮಮ್ಮ, ಶಕುಂತಲಾ ಶಿವಕುಮಾರ್, ಶೇಷಯ್ಯ, ಎಚ್.ಸಿ ಉಮೇಶ್, ದೇವೇಂದ್ರಪ್ಪ, ಪಿ.ಎನ್. ಲೋಕೇಶ್, ಮಹದೇವ ಆಚಾರ್, ಎಚ್.ಎಂ ಶಿವಕುಮಾರ್, ಎಚ್ ಪಿ ರಾಜೇಂದ್ರ, ಯುವರಾಜ್ ಗೌಡ, ರಮೇಶ್ ನಾಯ್ಕ ನಳ್ಳಿನಕೊಪ್ಪ, ಜಯಾನಾಯ್ಕ ಸಹಿತ ಬಹುತೇಕ ಗುತ್ತಿಗೆದಾರರು ಉಪಸ್ಥಿತರಿದ್ದರು.