ಬಾಕಿ ಬಿಲ್‌ ಪಾವತಿಗಾಗಿ ಕಾಮಗಾರಿ ಸ್ಥಗಿತಗೊಳಿಸಿ ಬಿಬಿಎಂಪಿ ಗುತ್ತಿಗೆದಾರರ ಧರಣಿ

| Published : Sep 03 2024, 01:33 AM IST / Updated: Sep 03 2024, 07:46 AM IST

ಬಾಕಿ ಬಿಲ್‌ ಪಾವತಿಗಾಗಿ ಕಾಮಗಾರಿ ಸ್ಥಗಿತಗೊಳಿಸಿ ಬಿಬಿಎಂಪಿ ಗುತ್ತಿಗೆದಾರರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಮಗಾರಿಗಳ ಬಾಕಿ ಬಿಲ್‌ ಪಾವತಿಗೆ ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರು ಸೋಮವಾರ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

 ಬೆಂಗಳೂರು :  ಕಾಮಗಾರಿಗಳ ಬಾಕಿ ಬಿಲ್‌ ಪಾವತಿಗೆ ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರು ಸೋಮವಾರ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ 2021ರ ಏಪ್ರಿಲ್‌ ನಂತರದ ಕಾಮಗಾರಿಗಳ ಬಿಲ್‌ ಮೊತ್ತದಲ್ಲಿ ಈವರೆಗೆ ಶೇ. 75ರಷ್ಟನ್ನು ಮಾತ್ರ ಪಾವತಿಸಲಾಗಿದೆ. ಉಳಿದ ಶೇ. 25ನ್ನು ಪಾವತಿಸದೇ ಬಿಬಿಎಂಪಿ ನಿರ್ಲಕ್ಷ್ಯವಹಿಸುತ್ತಿದೆ. ಬಿಲ್‌ ಪಾವತಿಗೆ ಆಗ್ರಹಿಸಿ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಲ್‌ ಪಾವತಿಸುವವರೆಗೆ ವಾರ್ಡ್‌ ಮಟ್ಟದ ಕಾಮಗಾರಿಗಳು, ರಸ್ತೆ ನಿರ್ವಹಣೆ ಸೇರಿದಂತೆ ಎಲ್ಲ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುತ್ತಿದೆ ಎಂದು ಗುತ್ತಿಗೆದಾರರು ಹೇಳಿದರು.

ಪ್ರತಿಭಟನಾ ನಿರತ ಗುತ್ತಿಗೆದಾರರನ್ನು ಬಿಬಿಎಂಪಿ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರಾದರೂ, ಗುತ್ತಿಗೆದಾರರು ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯಲಿಲ್ಲ. ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಗುತ್ತಿಗೆದಾರರು, ಬಿಲ್‌ ಪಾವತಿಸುವವರೆಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಪ್ರತಿಭಟಿಸುವುದಾದರೆ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಡಿ, ಬಿಬಿಎಂಪಿ ಕಚೇರಿ ಆವರಣದಲ್ಲಿ ಪ್ರತಿಭಟಿಸಲು ಅವಕಾಶವಿಲ್ಲ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಶೇ. 80ರಷ್ಟು ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಉಳಿದ ಶೇ. 20ರಷ್ಟು ಗುತ್ತಿಗೆದಾರರು ಮಾತ್ರ ಈವರೆಗೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರರ ಪ್ರತಿಭಟನೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಗತ್ಯವಿರುವಲ್ಲಿ ನಮ್ಮ ಸಂಪನ್ಮೂಲವನ್ನು ಇಟ್ಟುಕೊಂಡು ಕೆಲಸ ಮಾಡಿಸುತ್ತೇವೆ ಎಂದರು.

ಬಿಬಿಎಂಪಿ ಕಾಮಗಾರಿಗಳ ಗುಣಮಟ್ಟ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ನ್ಯಾ. ನಾಗಮೋಹನದಾಸ್‌ ಅವರ ತನಿಖಾ ಆಯೋಗ ವರದಿ ನೀಡುವವರೆಗೆ ಗುತ್ತಿಗೆದಾರರ ಬಿಲ್‌ನ ಶೇ. 25ರಷ್ಟು ಮೊತ್ತವನ್ನು ಪಾವತಿಸದಂತೆ ಸರ್ಕಾರ ಸೂಚಿಸಿದೆ. ಸರ್ಕಾರ ಸೂಚಿಸಿದರೆ ಬಾಕಿ ಶೇ. 25ರಷ್ಟು ಹಣ ಪಾವತಿಸುತ್ತೇವೆ ಎಂದು ತಿಳಿಸಿದರು.

ಬಿಬಿಎಂಪಿ ಗುತ್ತಿಗೆದಾರರು ಬಿಲ್ ಬಾಕಿ ವಿಚಾರದಲ್ಲಿ ಅವರ ನೋವು ಅರ್ಥವಾಗುತ್ತದೆ. ಶೇ.50 ರಷ್ಟಿದ್ದ ಬಿಲ್ ಬಾಕಿಯನ್ನು ಶೇ.75ಕ್ಕೆ ಇಳಿಸಿದ್ದೇನೆ. ಒಂದಷ್ಟು ಭಾಗ ಆಯೋಗದ ಮುಂದಿದೆ. ಇದು ಇತ್ಯರ್ಥವಾದ ನಂತರ ಕಾನೂನಾತ್ಮಕವಾಗಿ ಹೇಗೆ ಸಹಾಯ ಮಾಡಲಾಗುವುದೋ ಆ ರೀತಿ ಅವರ ನೆರವಿಗೆ ನಿಲ್ಲಲಾಗುವುದು.

-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ.