ಸಾರಾಂಶ
ಕಾರಣಗಳಿಂದ ಕಾಮಗಾರಿ ಬಾಕಿ ಉಳಿಸಿರುವ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಸೂಚಿಸಿದರು
ಕಾರವಾರ: ಜಿಲ್ಲೆಯಲ್ಲಿ ಕೈಗೊಂಡಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಹೆಚ್ಚಿನ ಕಾಲವಕಾಶ ತೆಗೆದುಕೊಂಡರೆ ಅವರಿಗೆ ದಂಡ ವಿಧಿಸಲು ಜಿಪಂ ಕಾರ್ಯ ನಿರ್ವಹಣಾಧಿಕಾರಿ ಡಾ. ದಿಲಿಷ್ ಶಶಿ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುತ್ತಿಗೆದಾರರು ಜೆಜೆಎಂ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಜಾಗದ ಸಮಸ್ಯೆ, ಅರಣ್ಯ ಇಲಾಖೆ, ಸಾರ್ವಜನಿಕರ ತೊಂದರೆ, ಹೆಸ್ಕಾಂನಿಂದ ಸಮಸ್ಯೆ ಹಾಗೂ ವಿವಿಧ ಕಾರಣಗಳಿಂದ ವಿಳಂಬವಾಗಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದು ಅಂತಹ ಕಾಮಗಾರಿ ಪೂರ್ಣಗೊಳಿಸಲು ಕಾಲವಧಿ ನೀಡಲು ಅವಕಾಶವಿದ್ದಲ್ಲಿ ರಿಯಾಯಿತಿ ನೀಡಿ. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಇರುವ ಕಾಮಗಾರಿ ಹೊರತುಪಡಿಸಿ ಇತರ ಕಾರಣಗಳಿಂದ ಕಾಮಗಾರಿ ಬಾಕಿ ಉಳಿಸಿರುವ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಸೂಚಿಸಿದರು.ವಿಳಂಬವಾಗಿರುವ ಮತ್ತು ಪ್ರಗತಿಯಲ್ಲಿರುವ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿ ಈ ಬಗ್ಗೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು, ಈ ಕಾಮಗಾರಿಗಳ ಬಗ್ಗೆ ಪ್ರತ್ಯೇಕ ಸಭೆ ಆಯೋಜನೆ ಮಾಡಿ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳ ಅವಧಿ ವಿಸ್ತರಣೆ, ಪ್ರಸ್ತಾವನೆ, ಅನುಮೋದನೆ ಹಾಗೂ ಡಂಪ್ ಡೇಟಾ ಅನುಮೋದನೆ ಮತ್ತು ನೀರಿನ ಮೂಲಗಳ ರಕ್ಷಣೆ ಮತ್ತು ಸಂರಕ್ಷಣೆ ಕುರಿತು ವಿಸ್ತೃತ ಚರ್ಚೆ ನಡೆಯಿತು.ಜಿಪಂ ಜಿಲ್ಲಾ ಮುಖ್ಯ ಲೆಕ್ಕಾಧಿಕಾರಿ ಆನಂದ ಸಾ ಹಬೀಬ್, ಜಿಪಂ ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಧಾರವಾಡ ವಿಭಾಗದ ಎಂಜಿನಿಯರ್ ಆರ್.ಎಂ. ಸೊಪ್ಪಿಮಠ ಇದ್ದರು.