ನರೇಗಾ ಹಣ ಬಿಡುಗಡೆ ಮಾಡಲು ಫೆ.೫ ಗಡುವು ನೀಡಿದ ಗುತ್ತಿಗೆದಾರರು

| Published : Jan 26 2024, 01:53 AM IST

ನರೇಗಾ ಹಣ ಬಿಡುಗಡೆ ಮಾಡಲು ಫೆ.೫ ಗಡುವು ನೀಡಿದ ಗುತ್ತಿಗೆದಾರರು
Share this Article
  • FB
  • TW
  • Linkdin
  • Email

ಸಾರಾಂಶ

ತುರುವೇಕೆರೆ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಮಾಡಲಾಗಿರುವ ನರೇಗಾ ಯೋಜನೆಯ ಸುಮಾರು ೧೫ ಕೋಟಿ ರೂಗಳನ್ನು ಕೂಡಲೇ ಬಿಡುಗಡೆ ಮಾಡಲು ಫೆ ೫ ಗಡುವು ನೀಡಿರುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.

ಸುಮಾರು 15 ಕೋಟಿ ಹಣ ಬಿಡುಗಡೆಗೆ ಗುಡುವು । ನರೇಗಾ ಸಹಾಯಕ ನಿರ್ದೇಶಕ ಸುಭಾಷ್‌ ವಿರುದ್ಧ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಮಾಡಲಾಗಿರುವ ನರೇಗಾ ಯೋಜನೆಯ ಸುಮಾರು ೧೫ ಕೋಟಿ ರೂಗಳನ್ನು ಕೂಡಲೇ ಬಿಡುಗಡೆ ಮಾಡಲು ಫೆ ೫ ಗಡುವು ನೀಡಿರುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.

ಗುರುವಾರ ನರೇಗಾ ಕಾಮಗಾರಿಯ ಸಾಮಗ್ರಿ ಬಿಲ್ ಹಣವನ್ನು ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಗ್ರಾಪಂ ಸದಸ್ಯರು ಹಾಗೂ ವೆಂಡರ್‌ಗಳು ತಾಪಂ ಇಒ ಶಿವರಾಜಯ್ಯರನ್ನು ಒತ್ತಾಯಿಸಿದರು.

ಕೊಡಗಿಹಳ್ಳಿ ಗ್ರಾಪಂ ಸದಸ್ಯ ದೇವರಾಜು ಮಾತನಾಡಿ, ಸುಮಾರು ೩ ವರ್ಷಗಳಿಂದ ನರೇಗಾ ಕಾಮಗಾರಿಯನ್ನು ಮಾಡಲಾಗಿದೆ. ಕಾಮಗಾರಿಯ ಕೂಲಿ ಹಣವನ್ನು ಹಾಕಲಾಗಿದೆ. ಆದರೆ ಸಾಮಗ್ರಿ ಬಿಲ್‌ಗಳನ್ನು ಇದುವರೆವಿಗೂ ಹಾಕಿಲ್ಲ. ಕಾಮಗಾರಿ ಪರಿಶೀಲನೆ ಮಾಡಿ ಆಡಿಟ್ ಸಹ ಮಾಡಲಾಗಿದೆ. ಆದರೂ ಸಹ ಸಾಮಗ್ರಿ ಹಣವನ್ನು ಹಾಕಿಲ್ಲ ಎಂದು ದೂರಿದರು.

ತಾಲೂಕಿನ ಎಲ್ಲ ಗ್ರಾಪಂನಿಂದ ಸುಮಾರು ೧೫ ಕೋಟಿ ಸಾಮಗ್ರಿ ಹಣ ನೀಡಬೇಕಿದೆ. ತುರುವೇಕೆರೆ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಾಮಗ್ರಿ ಹಣವನ್ನು ಹಾಕಲಾಗಿದೆ. ಸಾಮಗ್ರಿ ಪೂರೈಸಿದ ವೆಂಡರ್‌ಗಳು ಸಹ ಸಾಲ ಮಾಡಿ ಸಾಮಗ್ರಿ ಪೂರೈಸಿದ್ದಾರೆ. ಸಾಮಗ್ರಿ ಬಿಲ್ ನೀಡದೆ ವೆಂಡರ್‌ಗಳು ವಿಷ ಕುಡಿಯುವ ಹಂತಕ್ಕೆ ತಲುಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ದಿನಗಳಿಂದ ತಾಪಂ ಇಒ ಅವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ನರೇಗಾ ಸಹಾಯಕ ನಿರ್ದೇಶಕರಾಗಿರುವ ಸುಭಾಷ್ ಚಂದ್ರ ಸಹ ಬಿಲ್ ಮಾಡುತ್ತಿಲ್ಲ. ಕಾಮಗಾರಿ ಸರಿ ಇಲ್ಲ ಎಂದರೆ ಬಿಲ್ ಮಾಡುವುದು ಬೇಡ. ಕಾಮಗಾರಿಗಳು ಸರಿಯಾಗಿ ಗುಣಮಟ್ಟವನ್ನು ಪರಿಶೀಲಿಸಿ ಹಣ ನೀಡಲಿ. ಗುತ್ತಿಗೆದಾರರಿಗೆ ವಿನಾಕಾರಣ ತೊಂದರೆ ಕೊಡುತ್ತಿರುವ ಸುಭಾಷ್ ಚಂದ್ರ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಹಾಗೂ ಎಲ್ಲ ಸಾಮಗ್ರಿ ಹಣವನ್ನು ಕೂಡಲೇ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸಾಮಗ್ರಿ ಬಿಲ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಾಪಂ ಮುಂಭಾಗ ಶಾಮಿಯಾನ ಹಾಕಿ ಧರಣಿ ಮಾಡಲಾಗುವುದು ಎಂದು ಗುತ್ತಿಗೆದಾರ ದೊಡ್ಡಾಘಟ್ಟ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಇಒ ಶಿವರಾಜಯ್ಯ ಮಾತನಾಡಿ, ತಾವು ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆಯಷ್ಟೇ ತಾಲೂಕಿಗೆ ವರ್ಗವಾಗಿ ಬಂದಿದ್ದೇನೆ. ನರೇಗಾ ಕಾಮಗಾರಿ ಬಿಲ್ ಬಗ್ಗೆ ಪರೀಶಿಲಿಸುತ್ತೇನೆ. ೧೫ ಕೋಟಿ ಹಣ ಬಾಕಿ ಇದೆ ಎಂಬ ಮಾಹಿತಿ ಇದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನರೇಗಾ ಸಹಾಯಕ ನಿರ್ದೇಶಕ ಸುಭಾಷ್‌ಚಂದ್ರ ಅವರನ್ನು ವಿಚಾರಿಸಲಾಗಿ ಕಾಮಗಾರಿಗಳು ನೂನ್ಯತೆಗಳಿವೆ ಸಮರ್ಪಕವಾಗಿಲ್ಲ. ಎಂ.ಬಿ. ಪುಸ್ತಕದಲ್ಲಿ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಶೇ ೮೦ರಷ್ಟು ಪೈಲ್‌ಗಳನ್ನು ಪರಿಶೀಲಿಸಲಾಗಿದೆ. ಸದ್ಯದಲ್ಲಿಯೇ ನರೇಗಾ ಕಾಮಗಾರಿಗಳ ಎಂಎಎಸ್ ಮಾಡಲಾಗುವುದು ಎಂದು ಭರವಸೆ ನೀಡಿದರು. ಮುಂದಿನ ಫೆ.೫ ರೊಳಗೆ ಗುತ್ತಿಗೆದಾರರ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿಸಲು ಪ್ರಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಹಾಗೂ ನರೇಗಾ ಎ.ಡಿ. ಸುಬಾಷ್ ಚಂದ್ರ ಅವರನ್ನು ಕೂಡಲೇ ಬೇರೆ ಕಡೆ ನಿಯೋಜಿಸಲಾಗುವುದು ಎಂದು ಇಒ ಶಿವರಾಜಯ್ಯ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಮಂಗಿಕುಪ್ಪೆ ಬಸವರಾಜು, ತ್ಯಾಗರಾಜು, ಕಾಂತರಾಜು, ಕೀರ್ತಿ, ಪ್ರಕಾಶ್, ಶ್ರೀನಿವಾಸ್, ರಾಮಕೃಷ್ಣ, ಶಿವಕುಮಾರ್, ಲಕ್ಷ್ಮಣಗೌಡ, ರಂಗಸ್ವಾಮಿ, ಕೃಷ್ಣಯ್ಯ, ಕುಮಾರ್, ದೇವರಾಜು, ರವಿ, ನರಸಿಂಹ, ನಂಜುಂಡಯ್ಯ ಆನಂದ್ ಮರಿಯಾ ಸೇರಿದಂತೆ ಇತರರು ಇದ್ದರು.