ಸಾರಾಂಶ
ಕನ್ನಡಪ್ರಭವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ತಯಾರಿಕೆ ಸಂಬಂಧ ಶೇ.100ರಷ್ಟು ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಹಾಗೂ ಮತದಾನದ ಶೇಖಡಾವಾರು ಪ್ರಮಾಣವನ್ನು ಹೆಚ್ಚಿಸಲು ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ನೋಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಪ್ರತಿವರ್ಷ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಹಾಗೂ ಅಕ್ಟೋಬರ್ 1ರ ದಿನಾಂಕಗಳನ್ನು ಅರ್ಹತಾ ದಿನಗಳೆಂದು ಪರಿಗಣಿಸಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಕೈಗೊಳ್ಳಲಾಗುತ್ತದೆ. ಈ ಅವಧಿಯಲ್ಲಿ 18 ವರ್ಷ ತುಂಬಿದ ಯುವ ಮತದಾರರು ಹಾಗೂ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಪರಿಷ್ಕರಣಾ ಕಾರ್ಯಕ್ಕೆ ನೆರವಾಗಬೇಕು ಎಂದರು.ಜಿಲ್ಲೆಯಲ್ಲಿ ಒಟ್ಟು 983 ಮತಗಟ್ಟೆಗಳಿದ್ದು, 432291 ಪುರುಷರು, 447983 ಮಹಿಳೆಯರು ಹಾಗೂ 56 ಇತರರು ಸೇರಿದಂತೆ ಒಟ್ಟು 880630 ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಯುವ ಮತದಾರರನ್ನು ನೊಂದಣಿ ಮಾಡಲು ನಮೂನೆ-6ರಲ್ಲಿ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಹಾಗೂ ಆಯಾ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್ (ವಿ.ಎಚ್.ಎ) ಮತ್ತು ವೆಬ್‌ಸೈಟ್ https://voters.eci.gov.in ನಲ್ಲಿ ಆನ್‌ಲೈನ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಮರಣ ಹೊಂದಿದ ಮತದಾರರನ್ನು ಪಟ್ಟಿಯಿಂದ ಕೈಬಿಡಲು ನಮೂನೆ 7ರಲ್ಲಿ ಮಾಹಿತಿ ನೀಡಬೇಕು. ಸ್ಥಳಾಂತರಗೊಂಡ ಮತದಾರರು, ಪುನಾರಾವರ್ತನೆಗೊಂಡಿರುವ ಹೆಸರುಗಳನ್ನು ಕೈಬಿಡುವ ಬಗ್ಗೆ ಹಾಗೂ ವಿವಾಹಿತ ಮಹಿಳಾ ಮತದಾರರ ಹೆಸರು ಎರಡು ಮತಕ್ಷೇತ್ರದಲ್ಲಿ ದಾಖಲಾಗಿರುವಂತಹ ಪ್ರಕರಣಗಳನ್ನು ಗುರುತಿಸಲು ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಮತಗಟ್ಟೆ ಮಟ್ಟದ ಏಜೆಂಟರನ್ನು ನಿಯೋಜಿಸಬೇಕು. ನಿಯೋಜಿತ ಏಜೆಂಟರು ಹಾಗೂ ಮತಗಟ್ಟೆ ಮಟ್ಟದ (ಬಿ.ಎಲ್.ಒ) ಅಧಿಕಾರಿಗಳು ಸಮನ್ವಯದಿಂದ ಪರಿಷ್ಕರಣಾ ಕಾರ್ಯದಲ್ಲಿ ಸಕ್ರಿಯರಾಗಬೇಕು ಎಂದರು.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಬಿಡುವಂತಹವು, ತಿದ್ದುಪಡಿ, ಸ್ಥಳಾಂತರ ಸೇರಿದಂತೆ ಇತರೆ ವಿಷಯಗಳ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿ ಹಾಗೂ ಆಯಾ ತಹಸೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ. ಭಾರತ ಚುನಾವಣಾ ಆಯೋಗದ ವೆಬ್‌ಸೈಟ್ http://www.eci.gov.in, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ವೆಬ್‌ಸೈಟ್ http://ceo.karnataka.gov.in ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ http://chamarajnagar.nic.in/en ವೆಬ್‌ಸೈಟ್‌ನಿಂದ ಮತದಾರರ ಪಟ್ಟಿ ತಯಾರಿಕೆ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು.
ಜಿಲ್ಲೆಯಲ್ಲಿರುವ ಕಾಡಂಚಿನ ಪ್ರದೇಶಗಳು, ಗಿರಿಜನರ ಹಾಡಿಗಳು, ಕಾಲೋನಿಗಳಲ್ಲಿನ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು. ಅಂತರ್ಜಾಲವಿಲ್ಲದ ಮತಗಟ್ಟೆಗಳ ವಿವರ ಒದಗಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲರು, ವಿಶೇಷ ಚೇತನರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರಿಸಲು ಸಹಕಾರ ನೀಡಬೇಕು. ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯ ಮಹತ್ತರ ಕಾರ್ಯದ ಯಶಸ್ವಿಗೆ ಸಹಕರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ಚುನಾವಣಾ ಶಿರಸ್ತೇದಾರ್ ಬಸವರಾಜು, ವಿವಿಧ ರಾಜಕೀಯ ಪಕ್ಷಗಳ ಪ್ರತಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.