ಕನಕ ದಾಸರ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕರಿಸಿ: ಬಿ.ವಿ.ಕುಮಾರ್

| Published : Nov 17 2024, 01:19 AM IST

ಕನಕ ದಾಸರ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕರಿಸಿ: ಬಿ.ವಿ.ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಮಹನೀಯರ ಜಯಂತಿಗಳಿಗೆ ಸರ್ಕಾರ ರಜೆ ನೀಡಿದರೆ, ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಯಂತಿಯಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಾರೆ. ಕಡ್ಡಾಯವಾಗಿ ಭಾಗವಹಿಸಬೇಕು. ಕನಕದಾಸರ ಜಯಂತಿ ಅರ್ಥಪೂರ್ಣ ಆಚರಣೆಗೆ ಸಮುದಾಯದ ಮುಖಂಡರ ಅಗತ್ಯ ಸಹಕಾರ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದಾಸ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಕನಕದಾಸರ ಜಯಂತಿಯನ್ನು ನ.18ರಂದು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಸಂಘ ಸಂಸ್ಥೆ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಹಕರಿಸಬೇಕು ಎಂದು ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನ.18ರಂದು ನಡೆಯುವ ಕನಕ ಜಯಂತಿಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.

ಅಂದು ಬೆಳಗ್ಗೆ 9 ಗಂಟೆಗೆ ತಾಲೂಕು ಪಂಚಾಯ್ತಿಯಿಂದ ಕನಕದಾಸರ ಬೃಹತ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರತರಲಾಗುವುದು ಎಂದರು.

ಪ್ರದೇಶ ಕುರುಬರ ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ ಮಾತನಾಡಿ, ಕನಕದಾಸರ ಜಯಂತಿ ಅರ್ಥಪೂರ್ಣ ಆಚರಣೆಗೆ ಸಮುದಾಯದ ಮುಖಂಡರ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಉಪನ್ಯಾಸಕ ಎಚ್.ವಿ.ನಿಂಗರಾಜು ಮಾತನಾಡಿ, ಕನಕದಾಸರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಉಪನ್ಯಾಸ ಆಯೋಜನೆ ಅಗತ್ಯ ಎಂದರು.

ಮುಖಂಡ ಬಸವನಪುರದ ಕರಿಯಪ್ಪ ಮಾತನಾಡಿ, ಮಹನೀಯರ ಜಯಂತಿಗಳಿಗೆ ಸರ್ಕಾರ ರಜೆ ನೀಡಿದರೆ, ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಯಂತಿಯಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಾರೆ. ಕಡ್ಡಾಯವಾಗಿ ಭಾಗವಹಿಸಲು ಸೂಚನೆ ನೀಡುವಂತೆ ತಹಸೀಲ್ದಾರ್‌ಗೆ ಮನವಿ ಮಾಡಿದರು.

ಮುಖಂಡ ಮಂಚನಹಳ್ಳಿ ಮಹದೇವು ಮಾತನಾಡಿ, ಅರ್ಥಪೂರ್ಣ, ಅದ್ಧೂರಿ ಕನಕದಾಸರ ಜಯಂತಿ ಆಚರಣೆ ಸಂಬಂಧ ಸಭೆಯನ್ನು 15 ದಿನಗಳ ಹಿಂದೆಯೇ ಕರೆಯಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಕನಕದಾಸರ ಜಯಂತಿಯನ್ನು ಎಲ್ಲ ಸಮುದಾಯದವರ ಸಲಹೆ ಸಹಕಾರ ಪಡೆದು ಅದ್ಧೂರಿ ಆಚರಿಸುವಂತೆ ಸಲಹೆ ಮಾಡಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ತಾ.ಪಂ.ಯೋಜನಾಧಿಕಾರಿ ದೀಪು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಪದ್ಮಾ, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಮುಖಂಡರಾದ ಬಂಕ್ ಮಹದೇವು, ಗಂಗಾಧರ್ ಇದ್ದರು.