ಸಾರಾಂಶ
ಗಜೇಂದ್ರಗಡ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ತರ ಸ್ಥಾನ ಪಡೆದಿರುವ ಮತದಾನದಿಂದ ನಾವು ದೂರ ಉಳಿಯದೆ, ಮತದ ಹಕ್ಕನ್ನು ಚಲಾಯಿಸುವ ಸದೃಢ ದೇಶ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ತಾಪಂ ಇಒ ಡಾ. ಡಿ. ಮೋಹನ್ ಹೇಳಿದರು.ಸ್ಥಳೀಯ ಎಸ್.ಎಂ. ಭೂಮರಡ್ಡಿ ಕಾಲೇಜಿನಲ್ಲಿ ತಾಲೂಕು ಸ್ವೀಪ್ ಸಮಿತಿ, ತಾಲೂಕು ಆಡಳಿತ, ಪುರಸಭೆ, ಪೊಲೀಸ್ ಇಲಾಖೆ, ಸರ್ಕಾರಿ ಪ್ರೌಢಶಾಲೆ ಹಾಗೂ ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆ ಸಹಯೋಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ದೇಶದಲ್ಲಿ ಮತದಾನ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದ್ದು ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕು ಎಂಬುದು ಸಂವಿಧಾನದ ನಿಯಮ. ತಮ್ಮ ಒಳಿತು ಬಯಸುವ ಜನ ನಾಯಕನನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯುತ್ತದೆ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜ. ೨೫ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದರು.ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮಾತನಾಡಿ, ೧೮ ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನೋಂದಾಯಿಸಿಕೊಳ್ಳಲು ಹಿಂಜರಿಯಬೇಡಿ. ಮತದಾನದ ಮಹತ್ವ ತಿಳಿಸಲು ಪ್ರತಿ ವರ್ಷವೂ ಸಹ ಮತದಾರರಿಗೆ ಜಾಗೃತಿ ಮೂಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲಾಗುತ್ತಿದೆ ಎಂದರು.
ವಿಭಿನ್ನವಾಗಿ ಆಚರಣೆ: ಎಸ್.ಎಂ.ಭೂಮರಡ್ಡಿ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವೃತ್ತ ಬಿಡಿಸಿ ಅದರಲ್ಲಿ "ನಥಿಂಗ್ ಲೈಕ್ ವೋಟಿಂಗ್, ಐ ವೋಟ್ ಪಾರ್ ಸೂರ್ " ಎಂದು ಅಕ್ಷರ ಬರೆದು ಅದರ ಮೇಲೆ ಶಾಲಾ ಮಕ್ಕಳನ್ನು ಕುಳಿಸಿ ಮದತಾನ ಸಿಂಬಾಲ್ ಚಿತ್ರ ಬಿಡಿಸಿ ವಿಭಿನ್ನವಾಗಿ ಮಕ್ಕಳಿಗೆ ಯುವ ಮತದಾರರಿಗೆ ಜಾಗೃತಿ ಮೂಡಿಸುವ ಮೂಲಕ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಈ ವೇಳೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರು, ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆ ಹಾಗೂ ಕಾಲೇಜಿನ ಪ್ರಾಚಾರ್ಯರು, ಮುಖ್ಯೋಪಾದ್ಯಾಯರು, ಶಿಕ್ಷಕರು, ಸರ್ಕಾರಿ ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ, ತಾಪಂ, ತಾಲೂಕು ಆಡಳಿತ, ಪುರಸಭೆಯ ಸಿಬ್ಬಂದಿ ಹಾಜರಿದ್ದರು.