ವ್ಯಸನ ಮುಕ್ತಗ್ರಾಮ ಮಾಡಲು ಸಹಕಾರ ನೀಡಿ: ಆನಂದ ದೇವರು

| Published : Mar 06 2025, 12:30 AM IST

ಸಾರಾಂಶ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಗ್ರಾಮದ ಹಿರಿಯರು, ಯುವಕರು ಸಹಕಾರ ನೀಡಬೇಕು ಎಂದು ಜಮಖಂಡಿ ಓಲೆಮಠದ ಆನಂದ ದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಗ್ರಾಮದ ಹಿರಿಯರು, ಯುವಕರು ಸಹಕಾರ ನೀಡಬೇಕು ಎಂದು ಜಮಖಂಡಿ ಓಲೆಮಠದ ಆನಂದ ದೇವರು ಹೇಳಿದರು. ಮಂಗಳವಾರ ಹಿರೇಪಡಸಲಗಿ ಗ್ರಾಮದ ಮಲ್ಲಿಕಾರ್ಜುನ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 23ನೇ ವಾರ್ಷಿಕೊತ್ಸವ ಹಾಗೂ 7ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಇಂದಿನ ಯುವಪೀಳಿಗೆ ವಿವಿಧ ವ್ಯಸನಗಳ ದಾಸರಾಗಿ ಆರೋಗ್ಯ ಹಾಳು ಮಾಡಿಕೊಂಡು ಮನೆ ಹಾಗೂ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಓಲೆಮಠವು ವ್ಯಸನಮುಕ್ತ ಗ್ರಾಮ ಮಾಡಲು ನಿರ್ಧರಿಸಿ, ತಾಲೂಕಿನ ಹಲವಾರು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಪೈಕಿ ಹಿರೇಪಡಸಲಗಿ ಗ್ರಾಮ ಒಂದಾಗಿದೆ ಎಂದು ಹೇಳಿದ ಅವರು, ಸಮಾಜಮುಖಿ ಕಾರ್ಯಕ್ಕೆ ಎಲ್ಲರ ಸಹಕಾರ ಅವಶ್ಯವಾಗಿ ಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಂಪಾದಿಸಿಕೊಂಡು ಮಾದರಿಯಾಗಬೇಕು ಎಂದು ಹೇಳಿದರು.

ಇದೇ ವೇಳೆ 7ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಗೋ.ಬಳಗಾರ, ಅಮೃತಾ ಚೌಹಾಣ, ಸಹನಾಕೊಳೂರು ಬಹುಮಾನ ಪಡೆದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಲಕ್ಷಣ ಸೌದಿ, ಪಿಡಿಒ ಸಂಜುಕುಮಾರ ಮಲ್ಕಣ್ಣವರ, ಡಾ.ಸಂಗಮೇಶ ನಾಗನೂರು, ಶೇಖರ ಯತ್ನಾಳ, ಧರೆಪ್ಪ ಬಿದರಿ ಇತರರು ವೇದಿಕೆಯಲ್ಲಿದ್ದರು. ಮಲ್ಲೇಶ ಹುಟಗಿ ಸ್ವಾಗತಿಸಿದರು. ಭಗತ ರಜಪೂತ ನಿರೂಪಿಸಿದರು. ಮುಖ್ಯಗುರು ಲಕ್ಷ್ಮಣ ಚೌಹಾಣ ವಂದಿಸಿದರು. ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.