ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆಯು ಫೆ.23ರ ರವರೆಗೆ ನಡೆಯಲಿದ್ದು, ಇದರ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಗರೀಮಾ ಪನ್ವಾರ ಅವರು ಕೋರಿದ್ದಾರೆ.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಕುರಿತಂತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಭಾರತ ಸಂವಿಧಾನ ಜಾಗೃತಿ ಜಾಥಾವು ಜ.26ರಂದು ಜಿಲ್ಲಾಮಟ್ಟದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.ಸಂವಿಧಾನ ಜಾಗೃತಿ ಜಾಥಾವು ಯಾದಗಿರಿ ಜಿಲ್ಲೆಯ ಪ್ರತಿಯೊಂದು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ 122 ಗ್ರಾಮ ಪಂಚಾಯಿತಿ ಹಾಗೂ 07 ಸ್ಥಳೀಯ ನಗರ ಪ್ರದೇಶಗಳವರೆಗೆ ಪ್ರತಿದಿನ ಒಂದು ತಾಲೂಕಿನಲ್ಲಿ ನಾಲ್ಕರಿಂದ ಐದು ಗ್ರಾಮ ಪಂಚಾಯಿತಿಗಳಿಗೆ ಸ್ತಬ್ಧಚಿತ್ರಗಳೊಂದಿಗೆ ಆಗಮಿಸಲಿದೆ. ಸಂವಿಧಾನ ಜಾಗೃತಿ ಜಾಥಾವು ಯಾವುದೇ ಆಕ್ಷೇಪಣೆಗಳಿಗೆ ಅವಕಾಶ ಮಾಡದಂತೆ ಜವಾಬ್ದಾರಿಯಿಂದ ನಿರ್ವಹಿಸುವ ಉದ್ದೇಶದಿಂದ ಪ್ರತಿ ತಾಲೂಕು ಮತ್ತು ಪ್ರತಿ ಪಂಚಾಯಿಯಿಗಳಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.
ಅದರಂತೆ ಫೆ.15ರವರೆಗೆ ಒಟ್ಟು 97 ಗ್ರಾಮ ಪಂಚಾಯಿತಿ ಹಾಗೂ 4 ಸ್ಥಳೀಯ ನಗರ ಪ್ರದೇಶಗಳಲ್ಲಿ ತಲುಪಿದ್ದು, ಉಳಿದ ಇನ್ನೂ 25 ಗ್ರಾಮ ಪಂಚಾಯಿತಿ ಮತ್ತು 07 ಸ್ಥಳೀಯ ನಗರ ಪ್ರದೇಶಗಳು ಬಾಕಿ ಇದ್ದು, ಕಾರ್ಯಕ್ರಮಗಳಲ್ಲಿ ವಿವಿಧ ರೀತಿಯ ಚಟುವಟಿಗಳು ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆ ನಡೆಸಲಾಗಿದೆ. ಆನ್‌ಲೈನ್‌ನಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ‘ನಮ್ಮ ಸಂವಿಧಾನ ನಮ್ಮ ಹಮ್ಮೆ’ ನಿಮ್ಮ ಸೆಲ್ಫಿ ನಮ್ಮೊಂದಿಗೆ ಶೇರ್ ಮಾಡಿ ಬಹುಮಾನ ಗೆಲ್ಲರಿ ಎಂಬ ಅಭಿಯಾನ ಮಾಡಲಾಗಿದೆ ಎಂದು ತಿಳಿಸಿದರು.ಸಂವಿಧಾನ ಜಾಗೃತಿ ಜಾಥಾದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು, ನಾಗರಿಕರು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು, ನೌಕರರು ಮತ್ತು ಅಧಿಕಾರಿಗಳನ್ನು ಒಳಗೊಂಡಂತೆ ಸಂವಿಧಾನ ಜಾಗೃತಿ ಜಾಥಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕುರಿತು ಹಲವಾರು ಜನ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಎಲ್ಲರಿಗೂ ಯಾದಗಿರಿ ಜಿಲ್ಲೆಯ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸಬುಕ್, ಯೂಟ್ಯೂಬ್, ಇನ್ ಸ್ಟಾಗ್ರಾಂ, ವಾಟ್ಸಪ್ ಅಪ್ಲೋಡ್ ಮಾಡಲಾದ ವೀಡಿಯೋಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಲು ಹಾಗೂ ಯಶಸ್ವಿಗೊಳಿಸುವಂತೆ ಕೋರುತ್ತೇವೆ ಎಂದು ಅವರು ತಿಳಿಸಿದ್ದಾರೆ.