ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೆ ಸಹಕರಿಸಿ: ಚೆನ್ನಬಸಪ್ಪ

| Published : Feb 11 2024, 01:45 AM IST

ಸಾರಾಂಶ

ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸೋಣ, ಬೀದಿ ದೀಪಗಳನ್ನು ಹಚ್ಚಿ ವಿಶೇಷವಾಗಿ ಸ್ವಾಗತಿಸಿ, ಬೀಳ್ಕೋಡೋಣ ಎಂದು ಮುಖಂಡರು ಪೂರ್ವಸಿದ್ಧತಾ ಸಭೆಯಲ್ಲಿ ಸಲಹೆ ನೀಡಿದರು.

ಮುದಗಲ್: ಸಂವಿಧಾನ ದಿನಾಚರಣೆಯ ಪ್ರಯುಕ್ತ ಹಾಗೂ ರಾಷ್ಟ್ರೀಯ ಮಟ್ಟದ ಸಮ್ಮೇಳನದ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾ ಸಂಭ್ರಮದಿಂದ ಸ್ವಾಗತಿಸಿಕೊಳ್ಳಲು ಮತ್ತು ಬೀಳ್ಕೊಡುಗೆಗೆ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಜಾಥಾ ಮುದಗಲ್ ವಲಯದ ಉಸ್ತುವಾರಿ ಅಧಿಕಾರಿ ಹಾಗೂ ಇಂದಿರಾಗಾಂಧಿ ವಸತಿ ಶಾಲೆ ಪ್ರಾಚಾರ್ಯರಾದ ಚೆನ್ನಬಸಪ್ಪ ಮನವಿ ಮಾಡಿದರು.

ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ಲಿಂಗಸುಗೂರು ತಾಲೂಕಿನ ವಿವಿಧ ಗ್ರಾಪಂಗಳ ಮೂಲಕ ಮುದಗಲ್ ಪಟ್ಟಣಕ್ಕೆ ಫೆ.14ರ ಸಂಜೆ ಹೂನೂರು ಗ್ರಾಪಂ ಮೂಲಕ ಪಟ್ಟಣಕ್ಕೆ ರಥ ಆಗಮಿಸಲಿದೆ. ಅಂದು ಮೇಗಳಪೇಟೆಯಿಂದ ಸ್ವಾಗತಿಸಿ ಪಟ್ಟಣದ ಪುರಸಭೆ ರಂಗ ಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು. ಶಾಲಾ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಂವಿಧಾನದ ಕುರಿತು ವಿಶೇಷ ಉಪನ್ಯಾಸದ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಿಗಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಹಿರಿಯ ನಾಗರಿಕರಾದ ಗುರುಬಸಪ್ಪ ಸಜ್ಜನ, ದಸಂಸ ಮುಖಂಡರಾದ ಶರಣಪ್ಪ ಕಟ್ಟಿಮನಿ, ಸಂತೋಷ ಮತ್ತು ರಘುವೀರ ಮೇಗಳಮನಿ ಮಾತನಾಡಿ, ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸೋಣ, ಬೀದಿ ದೀಪಗಳನ್ನು ಹಚ್ಚಿ ವಿಶೇಷವಾಗಿ ಸ್ವಾಗತಿಸಿ, ಬೀಳ್ಕೋಡೋಣ ಎಂದು ಸಲಹೆ ನೀಡಿದರು.

ವೇದಿಕೆ ಮೇಲೆ ಉಪ ತಹಸೀಲ್ದಾರ್‌ ತುಳಜಾರಾಮಸಿಂಗ್, ಕಂದಾಯ ನಿರೀಕ್ಷಕ ಪಟ್ಟಣಶೆಟ್ಟಿ, ಮುಖ್ಯಾಧಿಕಾರಿ ನಬಿ ಕಂದಗಲ್ಲ, ಜೆಸ್ಕಾಂ ಶಾಖಾಧಿಕಾರಿ ಸಂತೋಷ ಸಿಂಘೆ ಸೇರಿ ಮುಂತಾದವರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ನೈರ್ಮಲ್ಯಾಧಿಕಾರಿ ಆರೀಫುನ್ನಿಸಾಬೇಗಂ ನೆರವೇರಿಸಿದರು.