ಸಮಗ್ರ ಅಭಿವೃದ್ಧಿಗೆ ಸಹಕರಿಸುವೆ: ಶಾಸಕ ಶ್ರೀನಿವಾಸ್‌

| Published : Aug 09 2024, 12:32 AM IST

ಸಾರಾಂಶ

ಪಕ್ಷಬೇಧ ಮಾಡದೇ ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ಎನ್. ಶ್ರೀನಿವಾಸ್ ಭರವಸೆ ನೀಡಿದರು. ನೆಲಮಂಗಲದಲ್ಲಿ ನಗರಸಭೆಗೆ ಅವಿರೋಧ ಆಯ್ಕೆಯಾದ ನೂತನ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಅವರಿಗೆ ಶುಭ ಕೋರಿ ಮಾತನಾಡಿದರು.

-ನಗರಸಭೆ ನೂತನ ಅಧ್ಯಕ್ಷೆ ಪೂರ್ಣಿಮಾ ಅವರಿಂದ ಶಾಸಕ ಶ್ರೀನಿವಾಸ್‌ ಅವರಿಗೆ ಸನ್ಮಾನ ಕನ್ನಡಪ್ರಭ ವಾರ್ತೆ ನೆಲಮಂಗಲ

ಪಕ್ಷಬೇಧ ಮಾಡದೇ ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ಎನ್. ಶ್ರೀನಿವಾಸ್ ಭರವಸೆ ನೀಡಿದರು.

ನಗರಸಭೆಗೆ ಅವಿರೋಧ ಆಯ್ಕೆಯಾದ ನೂತನ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಅವರು ಶಾಸಕ ಎನ್.ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಶುಭ ಕೋರಿದ ವೇಳೆ ನಗರಸಭೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಕಾರ್ಯಾರಂಭ ಸೇರಿದಂತೆ, ಸೊಂಡೆಕೊಪ್ಪ ರಸ್ತೆ ಅಗಲೀಕರಣ ಕಾಮಗಾರಿ, ಅರಿಶಿನಕುಂಟೆ ಬಳಿ ಅಂಡರ್ ಪಾಸ್‌ನಿಂದ ಕುಣಿಗಲ್ ವೃತದವರೆಗಿನ ರಸ್ತೆ ಅಭಿವೃದ್ಧಿ, ವಿಮಾನ ನಿಲ್ದಾಣ ಮಾದರಿಯಲ್ಲಿ ಬೀದಿ ದೀಪ ಅಳವಡಿಕೆ ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು, ನಗರದ ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಸ್ಥಳ ಪರಿಶೀಲಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಾಹನ ದಟ್ಟಣೆಗೂ ಕ್ರಮ ವಹಿಸಲಾಗುವುದು. ತಾಲೂಕಿನ ಕೆರೆಗಳಿಗೆ ವೃಷಬಾವತಿ ವ್ಯಾಲಿ ನೀರು ಹರಿಸಲಾಗುವುದು ಎಂದರು.

ಅಧ್ಯಕ್ಷೆಗೆ ಶುಭ ಕೋರಿದ ಶಾಸಕರು: ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದ ಪೂರ್ಣಿಮಾ ಅವರನ್ನು ಶಾಸಕರು ಮತ್ತವರ ಕುಟುಂಬದವರು ಸನ್ಮಾನಿಸಿ ಶುಭ ಕೋರಿದರು. ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ಮಾಡುವಂತೆ ಸಲಹೆ ನೀಡಿದರು.

ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಪಿಳ್ಳಪ್ಪ, ನಗರಸಭೆ ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸಿ.ಪ್ರದೀಪ್, ಸದಸ್ಯ ಆನಂದ್, ಪುರುಷೋತ್ತಮ, ಮುಖಂಡ ಕೆ.ಕೆ.ಕೃಷ್ಣಪ್ಪ, ಎಚ್.ಆರ್.ಬಸವರಾಜು ಮತ್ತಿತರರಿದ್ದರು.