ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಮಕ್ಕಳು ಶಾಲೆಯಲ್ಲಿ ಕಲಿಯುವುದರ ಜೊತೆಗೆ ಇತರೆ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವುದರಿಂದ ಅವರಲ್ಲಿ ಬೌದ್ಧಿಕ ಗುಣಮಟ್ಟ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ತಿಳಿಸಿದರು.26ನೇ ವಾರ್ಡ್‌ನ ಅಶೋಕನಗರದ ಚಂದ್ರಶೇಖರ್ ಆಜಾದ್ ಪಾರ್ಕಲ್ಲಿ ಕಿಡ್ಸ್ ಯೂನಿವರ್ಸ್ ಶಾಲೆ ವತಿಯಿಂದ ಆಯೋಜಿಸಿದ್ದ ಶಾಲಾ ಮಕ್ಕಳ ಹಸಿರು ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಶಾಲೆಯಲ್ಲಿ ಪಠ್ಯಕ್ರಮಗಳನ್ನಷ್ಟೇ ಕಲಿಯುತ್ತಾರೆ. ಆದರೆ ವಾಸ್ತವಿಕವಾಗಿ ಹೆಚ್ಚು ಜ್ಞಾನಾರ್ಜನೆ ಬೆಳೆಯುವುದೇ ಹೊರಗಿನ ಚಟುವಟಿಕೆಗಳ ಮೂಲಕ. ಇಂತಹ ಪಠ್ಯಕ್ಕೆ ಪೂರಕ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಮಕ್ಕಳು ಸರ್ವಾಂಗೀಣ ರೀತಿಯಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಅಶೋಕ ನಗರದ ಪಾಲಿಕೆಯ ಸದಸ್ಯರು ಸೇರಿಕೊಂಡಂತೆ ಸಾರ್ವಜನಿಕರಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸಂತೋಷದಾಯಕ ವಿಚಾರ. ಇಲ್ಲಿ ಪಾಲ್ಗೊಂಡಿರುವ ಮಕ್ಕಳು ಮತ್ತು ಪೋಷಕರ ಚಟುವಟಿಕೆಗಳನ್ನು ಗಮನಿಸಿದರೆ ಒಂದು ರೀತಿಯ ಹಬ್ಬದ ವಾತಾವರಣ ಕಂಡುಬರುತ್ತದೆ. ಇಲ್ಲಿ ಮಕ್ಕಳು ಭಾಗವಹಿಸಿ ಮಾರಾಟ ಮಳಿಗೆಯ ದೃಶ್ಯಗಳನ್ನು ನೋಡುವುದರಿಂದ ವ್ಯವಹಾರಿಕ ಜ್ಞಾನವೂ ವೃದ್ಧಿಯಾಗುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.ಮಹಾನಗರ ಪಾಲಿಕೆ ಸದಸ್ಯ ಎಚ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಾದುದು ನಮ್ಮೆಲ್ಲರ ಕರ್ತವ್ಯ. ತುಮಕೂರಿನ ಎಸ್‌ಐಟಿ ಬಡಾವಣೆ ಹಾಗೂ ಅಶೋಕ ನಗರಕ್ಕೆ ಹೊಂದಿಕೊಂಡ ಈ ಆಜಾದ್ ಪಾರ್ಕ್ ವಿವಿಧ ಕಾರ್ಯಕ್ರಮಗಳಿಗೆ ಸಹಕಾರಿಯಾಗಿದೆ. ಮಹಿಳೆಯರು ಮತ್ತು ಮಕ್ಕಳು, ಹಿರಿಯರಿಗಾಗಿ ಇಲ್ಲಿ ಸಾಕಷ್ಟು ಚಟುವಟಿಕೆಗಳನ್ನು ನಾಗರಿಕ ಸಮಿತಿಯ ಮೂಲಕ ಹಮ್ಮಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಗರೀಕರಿಗೆ ಉಪಯೋಗವಾಗುವ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಮಾಜಿ ಸದಸ್ಯ ಸಾ.ಚಿ. ರಾಜಕುಮಾರ್ ಮಾತನಾಡಿ, ಮಕ್ಕಳ ಸಂತೆ ಅಥವಾ ಮತ್ಯಾವುದೇ ಚಟುವಟಿಕೆಗಳು ಇರಲಿ ಇಂತಹ ಕಾರ್ಯಕ್ರಮಗಳು ಪೋಷಕರು ಮತ್ತು ಮಕ್ಕಳ ನಡುವೆ ಕ್ರಿಯಾತ್ಮಕ ಸಂಬಂಧಗಳನ್ನು ವೃದ್ಧಿಸಲು ಸಹಕಾರಿಯಾಗುತ್ತದೆ. ಶಾಲೆಯಲ್ಲಿ ಕಲಿಯುವುದು ಅಂಕಗಳಿಗಾಗಿ ಎಂಬ ಮನೋಭಾವ ದೂರವಾಗಿ ಇತರೆ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಆಗಮಾತ್ರ ಮಕ್ಕಳ ಮಾನಸಿಕ ವಿಕಸನಕ್ಕೆ ದಾರಿಯಾಗಲಿದೆ ಎಂದರು.ಇನ್ನರ್ ವ್ಹೀಲ್ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾಗರಾಜ್ ಮಾತನಾಡಿ, ಮಕ್ಕಳು ತಮ್ಮ ಪೋಷಕರೊಂದಿಗೆ ಭಾಗಿಯಾಗಿರುವುದು, ಮಾರುಕಟ್ಟೆಯ ಚಿತ್ರಣವನ್ನು ಇಲ್ಲಿ ಅಳವಡಿಸಿರುವುದು ಅತ್ಯಂತ ಸಂತೋಷಕರ ವಿಷಯ ಎಂದರು.
ಕಿಡ್ಸ್ ಯೂನಿವರ್ಸ್ ಸಂಸ್ಥೆಯ ಅಧ್ಯಕ್ಷ ಪಾಂಡುರಂಗಯ್ಯ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಮಕ್ಕಳು ಈಗಿನಿಂದಲೇ ಹೊರ ಪ್ರಪಂಚದ ಅರಿವು ಪಡೆದರೆ ಮುಂದಿನ ಸಾಧನೆಗೆ ಮೆಟ್ಟಿಲು ಆಗುತ್ತದೆ ಎಂದರು.ಕಿಡ್ಸ್ ಯೂನಿವರ್ಸ್ ಕಾರ್ಯದರ್ಶಿ ಶ್ರೀಕಾಂತ್, ಮುಖ್ಯ ಶಿಕ್ಷಕಿ ಸುಪ್ರಿಯಾ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಹೇಮಾ ಮಲ್ಲಿಕಾರ್ಜುನ್ ಸೇರಿದಂತೆ ಬಡಾವಣೆಯ ವಿವಿಧ ಮುಖಂಡರು ಭಾಗವಹಿಸಿದ್ದರು.