ಸಾರಾಂಶ
ಇತಿಹಾಸ ತಿಳಿಯಲು ಅನೇಕ ಆಧಾರಗಳಿವೆ. ಆದರೆ ಅದರಲ್ಲಿ ಅತ್ಯಂತ ಗಟ್ಟಿಯಾದ ಆಧಾರ ಸಾಹಿತ್ಯವಾಗಿದೆ. ಇಂತಹ ಸಾಹಿತ್ಯ ಆಧಾರದ ವೃದ್ಧಿಗಾಗಿ ಅನೇಕ ಕವಿಗಳು, ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಅದರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ.
ಕೊಪ್ಪಳ: ಡಾ.ಪಂಚಾಕ್ಷರಿ ಹಿರೇಮಠ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಾಗಿ ಅನೇಕ ಕೃತಿಗಳನ್ನು ನೀಡುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ ವಿಠ್ಠಲ್ ಚೌಗಲೆ ಹೇಳಿದರು.
ಅವರು ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ನೃಪತುಂಗ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಪಂಚಾಕ್ಷರಿ ಹಿರೇಮಠ 91ನೇ ಜನ್ಮ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಇತಿಹಾಸ ತಿಳಿಯಲು ಅನೇಕ ಆಧಾರಗಳಿವೆ. ಆದರೆ ಅದರಲ್ಲಿ ಅತ್ಯಂತ ಗಟ್ಟಿಯಾದ ಆಧಾರ ಸಾಹಿತ್ಯವಾಗಿದೆ. ಇಂತಹ ಸಾಹಿತ್ಯ ಆಧಾರದ ವೃದ್ಧಿಗಾಗಿ ಅನೇಕ ಕವಿಗಳು, ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಅದರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಪಂಚಾಕ್ಷರಿ ಹಿರೇಮಠ ತಮ್ಮ ವೃತ್ತಿಯ ಜೊತೆಗೆ ಸಾಹಿತ್ಯ ಪ್ರವೃತ್ತಿ ಮೂಲಕ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ಇಂತಹ ಮಹಾನ್ ಸಾಧಕರ ಕುರಿತಾದ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಮಕ್ಕಳು ಸಾಧಕರ ಜೀವನದ ಉತ್ತಮ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಿದ ಮಾತ್ರ ಈ ಕಾರ್ಯಕ್ರಮಕ್ಕೆ ಮಹತ್ವ ಬರುತ್ತದೆ ಎಂದು ಹೇಳಿದರು.ಹಿರಿಯ ಸಾಹಿತಿ ಡಿ.ಎಂ. ಬಡಿಗೇರ ಮಾತನಾಡಿ, ಬಿಸರಹಳ್ಳಿ ಗ್ರಾಮ ನಾಡಿನಲ್ಲಿ ಅತ್ಯಂತ ವಿಭಿನ್ನವಾದ ಗ್ರಾಮವಾಗಿದೆ. ರಾಜ್ಯದಲ್ಲೇ ಅತಿಹೆಚ್ಚು ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಳ್ಳಿಯಾಗಿದೆ. ಕೇವಲ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಈ ಹಳ್ಳಿ ಹೆಸರು ಮಾಡದೇ ಹೋರಾಟದಲ್ಲಿ ಕೂಡ ತನ್ನದೇ ಆದ ಕೊಡುಗೆ ನೀಡಿದೆ ಎಂದರು.ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಡಾ.ಪಂಚಾಕ್ಷರಿ ಹಿರೇಮಠ ಸಾಹಿತ್ಯ ಬರವಣೆಗೆ ಬಹಳ ಸರಳ ಹಾಗೂ ಎಲ್ಲರಿಗೂ ಬಹು ಬೇಗನೆ ಅರ್ಥವಾಗುವ ರೀತಿಯಲ್ಲಿ ಇವೆ. ಪ್ರಸ್ತುತ ದಿನಮಾನಗಳಲ್ಲಿ ಆದ ಬದಲಾವಣೆಗಳಿಂದ ಅನೇಕರು ಸಾಹಿತ್ಯಕ್ಕೆ ಪುಸ್ತಕಗಳನ್ನು ಅಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಯಾರು ಹೆಚ್ಚು ಪುಸ್ತಕಗಳನ್ನು ಅಧ್ಯಾಯನ ಮಾಡುತ್ತಾರೆ. ಅವರು ಹೆಚ್ಚು ಜ್ಞಾನವಂತರಾಗುತ್ತಾರೆ. ಈ ಒಂದು ಕಾರ್ಯಕ್ರಮ ಕೇವಲ ಜನ್ಮ ದಿನಾಚರಣೆ ಮಾಡದೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುದು ಮಾದರಿಯಾಗಿದೆ ಎಂದು ಹೇಳಿದರು.ಮೃತ್ಯುಂಜಯ ಹಿರೇಮಠ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ರವೀಂದ್ರಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಜಾನಪದ ವಿದ್ವಾಂಸ ಮಲ್ಲಯ್ಯಾ ತೋಟಗಂಟಿ, ಗ್ರಾಪಂ ಉಪಾಧ್ಯಕ್ಷ ಸುಶೀಲವ್ವ ಕೊಪ್ಪಳ, ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಸಂಶಿ, ಪಾರ್ವತಮ್ಮ ಹಿರೇಮಠ, ಅಂದಯ್ಯ ಬೃಹನಮಠ, ಶಾಂತವೀರಯ್ಯ ಹಿರೇಮಠ ಇದ್ದರು.ಕಾರ್ಯಕ್ರಮವನ್ನು ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಲಿಂಗಯ್ಯ ಹಿರೇಮಠ ನಿರೂಪಿಸಿದರು.ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ ಸ್ವಾಗತಿಸಿ, ಹನುಮಂತಪ್ಪ ಚಲವಾದಿ ವಂದಿಸಿದರು.