ಸಾರಾಂಶ
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ವತಿಯಿಂದ ‘ನಲಿ ಕುಣಿ’ ಯಕ್ಷಗಾನ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ . ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನಿಯುಕ್ತರಾದ ತಲ್ಲೂರು ಶಿವರಾಮ ಶೆಟ್ಟರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ದೇಶದ ನಾಗರಿಕತೆಯ ಬೆಳವಣಿಗೆಗೆ ಕಲೆ ಮತ್ತು ಸಾಹಿತ್ಯದ ಕೊಡುಗೆ ಅನನ್ಯ. ಇಂತಹ ಕಲೆ ಮತ್ತು ಸಾಹಿತ್ಯವನ್ನು ಬಾಲ್ಯದಲ್ಲಿಯೇ ಮಕ್ಕಳು ಕಲಿತಾಗ ಅವರು ಉತ್ತಮ ನಾಗರಿಕರಾಗುವುದರಲ್ಲಿ ಸಂಶಯವಿಲ್ಲ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಹಮ್ಮಿಕೊಂಡ ‘ನಲಿ ಕುಣಿ’ ಯಕ್ಷಗಾನ ಶಿಬಿರದಲ್ಲಿ ಅವರು ಮಾತನಾಡಿದರು.
ಯಕ್ಷಗಾನ ಕಲಾಕೇಂದ್ರ ಹಮ್ಮಿಕೊಂಡ ಇಪ್ಪತ್ತು ದಿವಸಗಳ ‘ನಲಿ ಕುಣಿ’ ಯಕ್ಷಗಾನ ಶಿಬಿರದಲ್ಲಿ ಮಕ್ಕಳು ಕಲಿತು ಪ್ರದರ್ಶಿಸಿದ ಪ್ರದರ್ಶನ ಕಂಡಾಗ ಸಂತೋಷವಾಗುತ್ತದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಗುರುಗಳೂ, ಕಲಾಕೇಂದ್ರವೂ ಅಭಿನಂದನಾರ್ಹರು ಎಂದರು.ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದರು. ವೇದಿಕೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಕಲಾ ಪ್ರೋತ್ಸಾಹಕ ವೆಂಕಟೇಶ ಭಟ್, ಪ್ರಾಚಾರ್ಯ ಸದಾನಂದ ಐತಾಳ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನಿಯುಕ್ತರಾದ ತಲ್ಲೂರು ಶಿವರಾಮ ಶೆಟ್ಟರನ್ನು ಗೌರವಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹತ್ತು ವರ್ಷಗಳ ಕಾಲ ಕಲಾಕೇಂದ್ರದ ವಿದ್ಯಾರ್ಥಿಯಾಗಿದ್ದು, ನಲಿ ಕುಣಿ ಶಿಬಿರದ ವಿದ್ಯಾರ್ಥಿಯಾಗಿ ೨೦೨೪ರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದದಲ್ಲಿ 9ನೇ ಸ್ಥಾನ ಪಡೆದ ವಿಭವನ ಹೇರ್ಳೆ ಅವರನ್ನು ಅಭಿನಂದಿಸಲಾಯಿತು. ಸೀತಾರಾಮ ಸೋಮಯಾಜಿ ಕೃತಜ್ಞತೆ ಸಲ್ಲಿಸಿದರು. ನಂತರ ಶಿಬಿರಾರ್ಥಿಗಳ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು.