ಸ್ವಚ್ಛತೆಯಲ್ಲಿ ಪೌರ ಕಾರ್ಮಿಕ ಕೊಡುಗೆ ಅಪಾರ: ಡಾ.ಡಿ.ಟಿ.ಮಂಜುನಾಥ್ ಶ್ಲಾಘನೆ

| Published : Aug 25 2024, 01:54 AM IST

ಸ್ವಚ್ಛತೆಯಲ್ಲಿ ಪೌರ ಕಾರ್ಮಿಕ ಕೊಡುಗೆ ಅಪಾರ: ಡಾ.ಡಿ.ಟಿ.ಮಂಜುನಾಥ್ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರು ತಮ್ಮ ಕರ್ತವ್ಯದ ಜೊತೆಯಲ್ಲಿ ತಮ್ಮಗಳ ವೈಯಕ್ತಿಕ ಶುಚಿತ್ವ, ಆರೋಗ್ಯ ಮತ್ತು ಕೌಟುಂಬಿಕ ಶುಚಿತ್ವದ ಕಡೆ ಗಮನಹರಿಸಬೇಕು ಹಾಗೂ ತಪ್ಪದೇ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೇ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ ಕೊಡುಗೆ ಅಪಾರ ಎಂದು ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ಟಿ.ಮಂಜುನಾಥ್ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಎನ್‌ಸಿಡಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಪೌರ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೌರ ಕಾರ್ಮಿಕರು ತಮ್ಮ ಕರ್ತವ್ಯದ ಜೊತೆಯಲ್ಲಿ ತಮ್ಮಗಳ ವೈಯಕ್ತಿಕ ಶುಚಿತ್ವ, ಆರೋಗ್ಯ ಮತ್ತು ಕೌಟುಂಬಿಕ ಶುಚಿತ್ವದ ಕಡೆ ಗಮನಹರಿಸಬೇಕು ಹಾಗೂ ತಪ್ಪದೇ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ದಂತ ಆರೋಗ್ಯಾಧಿಕಾರಿ ಡಾ. ಜೆ.ಡಿ.ಸ್ಮಿತಾ ಮಾತನಾಡಿ, ದೇಹದ ಆರೋಗ್ಯ ಕಾಪಾಡುವಲ್ಲಿ ಬಾಯಿ ಆರೋಗ್ಯ ಪ್ರಮುಖ. ಹಾಗಾಗಿ ನಿಯಮಿತವಾಗಿ ಹಲ್ಲು ಮತ್ತು ಬಾಯಿ ಸ್ವಚ್ಛತೆ ಕಾಪಾಡುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ಮತ್ತು ಹಲವು ರೋಗಗಳಿಂದ ದೂರ ಇರಬಹುದು ಎಂದು ತಿಳಿಸಿದರು.

ಶಿಬಿರದಲ್ಲಿ ಪೌರ ಕಾರ್ಮಿಕರಿಗೆ ಎಚ್‌ಐವಿ ಪರೀಕ್ಷೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬಾಯಿ ಆರೋಗ್ಯ ತಪಾಸಣೆ, ಕ್ಷಯ ರೋಗ ತಪಾಸಣೆ, ಹೆಪಟೈಟಿಸ್ ಲಸಿಕೆ, ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್ ಕೂಡ ಮಾಡಿ ಕೊಡಲಾಯಿತು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ ಪಿ ಮಾರುತಿ, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ದಂತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ಪರಿಸರ ಅಭಿಯಂತರರಾದ ಸಹನಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ್, ರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್, ಐಸಿಟಿಸಿ ಆಪ್ತ ಸಮಾಲೋಚಕಿ ಮಿಲನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹದೇವಮ್ಮ, ಬಿ. ಮಂಗಳ, ಪುರಸಭೆ ಆರೋಗ್ಯ ಸಹಾಯಕಿ ಚಂಪಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು, ಶುಶ್ರೂಷಣಾಧಿಕಾರಿಗಳು ಇದ್ದರು.