ಆರ್ಥಿಕ,ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ

| Published : Jan 04 2025, 12:30 AM IST

ಸಾರಾಂಶ

ಸಹಕಾರಿ ಹೃದಯ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳುವ ಮತ್ತು ಬಲವಾಗಿ ಹೊರ ಹೊಮ್ಮುವ ಸಾಮರ್ಥ್ಯ, ಭಾರತದ ಸಹಕಾರಿ ಚಳವಳಿಯ ಮೂಲಾಧಾರ

ಗದಗ: ಭಾರತದಲ್ಲಿ ಸಹಕಾರ ಚಳವಳಿ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿದ್ದು, ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.

ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಆಡಿಟೋರಿಯಂನಲ್ಲಿ ಶುಕ್ರವಾರ ಭಾರತೀಯ ಸಹಕಾರ ಅಧ್ಯಯನ ಸಂಸ್ಥೆ ಪುಣೆ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಮತ್ತು ವೈಕುಂಠ ಮೇಹ್ತಾ ರಾಷ್ಟ್ರೀಯ ಸಹಕಾರ ನಿರ್ವಹಣೆ ಸಂಸ್ಥೆ ಪುಣೆ ಸಹಯೋಗದಲ್ಲಿ ನಡೆದ ಸ್ಥಿತಿ ಸ್ಥಾಪಕತ್ವ ಮತ್ತು ಸುಸ್ಥಿರತೆಗಾಗಿ ಸಹಕಾರ ವ್ಯವಹಾರ ಮಾದರಿ ಎಂಬ ವಿಷಯದ ಮೇಲೆ 39ನೇ ವಾರ್ಷಿಕ ರಾಷ್ಟ್ರೀಯ ಸಂಶೋಧನಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಗದಗ ಜಿಲ್ಲೆಯ ಕಣಗಿನಹಾಳದಲ್ಲಿ 1905ರಲ್ಲಿ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಮೊದಲ ಕೃಷಿ ಸಾಲ ಸಹಕಾರ ಸಂಘ ಸ್ಥಾಪಿಸುವ ಮೂಲಕ ಸಹಕಾರದ ಬೀಜ ಬಿತ್ತಿದರು. ನಂತರ ಜಿಲ್ಲೆಯ ಹಿರೇಹಂದಿಗೋಳ ಹಾಗೂ ಹುಲಕೋಟಿಯಲ್ಲಿ ಸಹಕಾರ ಸಂಘ ಸ್ಥಾಪನೆಗೊಂಡವು. 1904ರಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿಗಳ ಕಾಯಿದೆ ಜಾರಿಗೊಳಿಸಿದಾಗಿನಿಂದ 2011ರ 97ನೇ ಸಾಂವಿಧಾನಿಕ ತಿದ್ದುಪಡಿಯವರೆಗೆ, ಸಹಕಾರಿ ಸಂಸ್ಥೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಒಳಗೊಳ್ಳುವಿಕೆಯ ಪ್ರಮುಖ ಸಾಧನಗಳಾಗಿ ಹೊರಹೊಮ್ಮಿವೆ ಎಂದರು.

ಸಹಕಾರಿ ಹೃದಯ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳುವ ಮತ್ತು ಬಲವಾಗಿ ಹೊರ ಹೊಮ್ಮುವ ಸಾಮರ್ಥ್ಯ, ಭಾರತದ ಸಹಕಾರಿ ಚಳವಳಿಯ ಮೂಲಾಧಾರವಾಗಿವೆ. ಭಾರತದ ಸಹಕಾರಿ ಕ್ಷೇತ್ರವು 8.50 ಕೋಟಿ ಸೊಸೈಟಿಗಳು ಮತ್ತು 29 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದಲ್ಲೇ ಅತಿ ದೊಡ್ಡ ಸಹಕಾರ ಕ್ಷೇತ್ರ ಹೊಂದಿರುವ ದೇಶವಾಗಿದೆ. ಈ ಸಂಸ್ಥೆಗಳು ಕೃಷಿ, ಸಂಬಂಧಿತ ವಲಯಗಳು, ಬ್ಯಾಂಕಿಂಗ್ ಮತ್ತು ಅದರಾಚೆಗಿನ ಬೆಳವಣಿಗೆಯ ಎಂಜಿನ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ರಚನೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿವೆ ಎಂದರು.

ಸ್ವಾತಂತ್ರ್ಯ ಪೂರ್ವ ಬೆಳವಣಿಗೆಯ ಪ್ರಮುಖ ಲಕ್ಷಣ ವಿವರಿಸಿದ ಸಚಿವರು, ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲರಂತಹ ನಾಯಕರು ಸಹಕಾರಿಗಳನ್ನು ಸಮಗ್ರ ಅಭಿವೃದ್ಧಿಗೆ ಸಾಧನವಾಗಿ, ಕೈ ಗೆಟುಕುವ ಸಾಲ, ಗ್ರಾಮೀಣ ಮೂಲಸೌಕರ್ಯ, ಶಿಕ್ಷಣ, ಕೈಗಾರಿಕೆ, ಜವಳಿ, ಜಾನುವಾರುಗಳ ಆಹಾರ ಮತ್ತು ಸಾಮಾಜಿಕ ಸಮಾನತೆ ಉತ್ತೇಜಿಸುವ ಸಾಧನಗಳಾಗಿ ರೂಪಿಸಿದರು ಎಂದರು.

ಪ್ರಸಕ್ತ ವರ್ಷವನ್ನು ರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಣೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಹಕಾರಿ ರಂಗ ಉದಯಿಸಿದ ಗದಗ ಜಿಲ್ಲೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ತಂದಿದ್ದು ಗದಗ ಜಿಲ್ಲೆ ನಮ್ಮ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿವಿ ರೆಜಿಸ್ಟಾರ್ ಡಾ.ಸುರೇಶ ನಾಡಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಗಾಗಿ ಸಹಕಾರ ವ್ಯವಹಾರ ಮಾದರಿ ಎಂಬ ವಿಷಯದ ಮೇಲೆ 39ನೇ ವಾರ್ಷಿಕ ರಾಷ್ಟ್ರೀಯ ಸಂಶೋಧನಾ ಸಮ್ಮೇಳನ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಹಾಗೂ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕಾರಣೀಭೂತರಾದ ಸಚಿವ ಎಚ್.ಕೆ. ಪಾಟೀಲ ಅಭಿನಂದನಾರ್ಹರು ಎಂದರು.

ಈ ಸಂದರ್ಭದಲ್ಲಿ ಪುಣೆಯ ಭಾರತೀಯ ಸಹಕಾರ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಜಿ.ಎಚ್. ಅಮಿನ್, ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಯಶವಂತ ಡೋಗ್ರೆ, ಪಿ.ಎಲ್.ಡಿ. ಬ್ಯಾಂಕ ಗುರಣ್ಣಾ ಬಳಗಾನೂರ, ಮರ್ಚಂಟ್ ಲಿಬರಲ್ ಕೋ ಆಪರೇಟಿವ್ ಬ್ಯಾಂಕ್‌ದ ಅಧ್ಯಕ್ಷ ಮೋಹನ ಕೋಟಿ, ನಬಾರ್ಡದ ಜಿ.ಜಗದೀಶ, ಎ.ಆರ್‌. ಪ್ರಸನ್ನಕುಮಾರ್, ಡಾ. ಅನಿಲ ಕರಂಜಿಕರ್, ಶರಣಗೌಡ ಪಾಟೀಲ, ಡಾ. ಅಬ್ದುಲ್ ಅಜಿಜ್ ಮುಲ್ಲಾ, ಡಾ. ಅಭಯಕುಮಾರ್ ಗಸ್ತಿ ಹಾಜರಿದ್ದರು.