ಸಂಶೋಧನೆಗೆ ಭಾರತೀಯರ ಕೊಡುಗೆ ಅಪಾರ: ಸ್ಮಿತ್‌

| Published : Jan 14 2024, 01:32 AM IST

ಸಾರಾಂಶ

ಸಂಶೋಧನೆಗೆ ಭಾರತೀಯರ ಕೊಡುಗೆ ಅಪಾರ: ನೋಬಲ್‌ ಪುರಸ್ಕೃತ ವಿಜ್ಞಾನಿ ಸ್ಮಿತ್‌ ಅಭಿಮತ, ಇನ್‌ಫೋಸಿಸ್‌ ಸೈನ್ಸ್‌ ಫೌಂಡೇಶನ್‌ನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಶೋಧನೆಗಳ ಮೂಲಕ ಭಾರತೀಯರು ವಿಶ್ವಕ್ಕೆ ಅಪಾರವಾದ ಕೊಡುಗೆ ನೀಡಿದ್ದು, ಸಹಬಾಳ್ವೆ ನಡೆಸಲು ಇಂತಹ ಜ್ಞಾನದ ಅವಶ್ಯಕತೆಯಿದೆ ಎಂದು ಭೌತಶಾಸ್ತ್ರದಲ್ಲಿ ನೋಬಲ್‌ ಪುರಸ್ಕೃತ, ಆಸ್ಟ್ರೇಲಿಯಾ ನ್ಯಾಷನಲ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಬ್ರಯಾನ್‌ ಸ್ಮಿತ್‌ ಹೇಳಿದರು.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ನಿಂದ ಶನಿವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಪ್ರತಿಷ್ಠಿತ ‘2023ನೇ ಸಾಲಿನ ಇನ್ಫೋಸಿಸ್‌ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಮನುಕುಲದ ಒಳಿತಿಗಾಗಿ ಶ್ರಮಿಸಿದ ಸಾಧಕರನ್ನು ಗುರುತಿಸಿ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ನಿಂದ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ಶ್ಲಾಘನೀಯ. ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆಯೇ ವಿನಃ ಭೂಮಿಯ ಪ್ರಮಾಣ ಮಾತ್ರ ಹೆಚ್ಚುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಸಾಧಕರು ತಮ್ಮ ಅಮೂಲ್ಯ ಸಂಶೋಧನೆಗಳ ಮೂಲಕ ಜಗತ್ತಿನ ಒಳಿತಿಗಾಗಿ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಮಾತನಾಡಿ, ವೈಜ್ಞಾನಿಕ ಸಂಶೋಧನೆ ನಡೆಸುವವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಿಂದ ಸಾಧಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ದೇಶದಲ್ಲಿ ವೈಜ್ಞಾನಿಕ ವಾತಾವರಣ ಇನ್ನಷ್ಟು ಬಲಗೊಳ್ಳಬೇಕು ಎಂದು ತಿಳಿಸಿದರು.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ನಿಂದ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದ್ದು, 2023 ನೇ ಸಾಲಿಗೆ ಆರು ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಪ್ರಶಸ್ತಿಯು ಚಿನ್ನದ ಪದಕ ಮತ್ತು ₹83 ಲಕ್ಷ (ಒಂದು ಲಕ್ಷ ಅಮೆರಿಕ ಡಾಲರ್‌) ನಗದು ಬಹುಮಾನ ಒಳಗೊಂಡಿದೆ. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ, ಫೌಂಡೇಷನ್‌ ಟ್ರಸ್ಟಿಗಳಾದ ನಂದನ್‌ ನೀಲೇಕಣಿ, ಮೋಹನ್‌ದಾಸ್‌ ಪೈ ಹಾಜರಿದ್ದರು.

6 ಸಾಧಕರಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಸೈನ್ಸ್‌ ಗ್ಯಾಲರಿಯ ಸಂಸ್ಥಾಪಕ ನಿರ್ದೇಶಕಿ ಜಾಹ್ನವಿ ಫಾಲ್ಕೆ, ಕಾನ್ಪುರ ಐಐಟಿಯ ಸುಸ್ಥಿರ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಸಚ್ಚಿದಾನಂದ ತ್ರಿಪಾಠಿ, ಬಯೋ ಎಂಜಿನಿಯರಿಂಗ್‌ ಮತ್ತು ಜೀವ ವಿಜ್ಞಾನ ವಿಭಾಗದ ಪ್ರೊ.ಅರುಣ್‌ಕುಮಾರ್‌ ಶುಕ್ಲಾ, ನ್ಯೂಜೆರ್ಸಿಯ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರೊ.ಭಾರ್ಗವ್‌ ಭಟ್‌, ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಾಜಿಕಲ್‌ ಸೈನ್ಸ್‌ನ ಪ್ರೊ.ಮುಕುಂದ್‌ ಥಟ್ಟೈ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ.ಮಂತೆನಾ ಅವರಿಗೆ 2023ನೇ ಸಾಲಿನ ಇನ್ಫೋಸಿಸ್‌ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.