ನಾಡಿಗೆ ಲಿಂಗಾಯತ ಮಠಗಳ ಕೊಡುಗೆ ಅನನ್ಯ: ಉಜ್ಜಯನಿ ಶ್ರೀ

| Published : Jan 06 2025, 01:00 AM IST

ನಾಡಿಗೆ ಲಿಂಗಾಯತ ಮಠಗಳ ಕೊಡುಗೆ ಅನನ್ಯ: ಉಜ್ಜಯನಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರ ಬದುಕಿಗೆ ಆರ್ಥಿಕ, ಸಾಮಾಜಿಕ, ಕೌಟಂಬಿಕ ಅನಕೂಲತೆ ಹಾಗೂ ಭದ್ರತೆ ಕೊಟ್ಟಂತಹ ಯಾವುದಾದರು ಕ್ಷೇತ್ರ ಇದ್ದರೆ ಅದು ವೀರಶೈವ ಲಿಂಗಾಯತ ಮಠ, ಮಂದಿರಗಳ ಕ್ಷೇತ್ರಗಳು ಎನ್ನುವುದನ್ನು ಯಾವ ಕಾಲಕ್ಕೂ ಮರೆಯಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಕಮತಗಿ

ಈ ನಾಡಿನೊಳಗೆ ಜಾತಿ, ಜನಾಂಗ, ಧರ್ಮ, ಬೇಧವಿಲ್ಲದೆ ಅನ್ನ, ಅಕ್ಷರ, ಆಶ್ರಯ, ಆಧ್ಯಾತ್ಮಿಕ ಹಾಗೂ ಅರಿವು ಅಂತಹ ಪಂಚ ಸಂಗಮಗಳನ್ನು ನಾಡಿಗೆ ಕೊಟ್ಟು ಎಲ್ಲರ ಬದುಕಿಗೆ ಆರ್ಥಿಕ, ಸಾಮಾಜಿಕ, ಕೌಟಂಬಿಕ ಅನಕೂಲತೆ ಹಾಗೂ ಭದ್ರತೆ ಕೊಟ್ಟಂತಹ ಯಾವುದಾದರು ಕ್ಷೇತ್ರ ಇದ್ದರೆ ಅದು ವೀರಶೈವ ಲಿಂಗಾಯತ ಮಠ, ಮಂದಿರಗಳ ಕ್ಷೇತ್ರಗಳು ಎನ್ನುವುದನ್ನು ಯಾವ ಕಾಲಕ್ಕೂ ಮರೆಯಲು ಸಾಧ್ಯವಿಲ್ಲ ಎಂದು ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಹಿರೇಮಠದ ಆವರಣದಲ್ಲಿ ಲಿಂ.ಚಂದ್ರಶೇಖರಯ್ಯ ಚರಂತಿಮಠ ಸ್ಮರಣಾರ್ಥ ಮಾಜಿ ಶಾಸಕ ವೀರಣ್ಣ ಚರಂತಿಮಠ ಗುರು ಚನ್ನಬಸವೇಶ್ವರ ಹಿರೇಮಠವನ್ನು ಹಾಗೂ ಕಲ್ಯಾಣಮಂಟಪವನ್ನು ಪುನಃ ನಿರ್ಮಾಣ ಮಾಡಿದ್ದ ಹಾಗೂ ಜಗದ್ಗುರು ಮರುಳಾರಾಧ್ಯರ ಮೂರ್ತಿ ಪ್ರತಿಷ್ಠಾಪನೆ, ಶ್ರೀಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರ 21ನೇ ವಾರ್ಷಿಕೋತ್ಸವ, ಧರ್ಮಸಭೆ ಹಾಗೂ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಗ್ರಂಥಾಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಮಠ, ಮಂದಿರಗಳ ದೇಶವಾಗಿದೆ. ಈ ದೇಶದಲ್ಲಿರುವ ಗುಡಿ, ಗುಂಡಾರಗಳು, ಮಠ, ಮಂದಿರಗಳನ್ನು ಪ್ರಪಂಚದ ಬೇರ್ಯಾವ ದೇಶಗಳಲ್ಲಿ ನಾವು ಕಾಣಲು ಸಾಧ್ಯವಿಲ್ಲ ಎಂದ ಅವರು, ಇನ್ನು ಭಾರತ ದೇಶದಲ್ಲಿ ಮಠ, ಮಂದಿರಗಳು ಇರುವ ಕಾರಣಕ್ಕಾಗಿ ಜನರಲ್ಲಿ ಶಾಂತಿ, ನೆಮ್ಮದಿ, ಪರಸ್ಪರ ಸಹಕಾರ, ಸಹಬಾಳ್ವೆ, ಪ್ರೀತಿ ವಿಶ್ವಾಸ, ಬ್ರಾತೃತ್ವ ಭಾವ ಇವೆಲ್ಲವೂ ಇಂದಿಗೂ ಮುಂದುವರೆದುಕೊಂಡು ಹೋಗುತ್ತಿದೆ ಎಂದು ಹೇಳಿದರು.

ಮಠಗಳು ಈ ದೇಶದ ಅದ್ಭುತವಾಗಿರುವಂತಹ ದಾರ್ಶನಿಕವಾದ ಇತಿಹಾಸ, ಆಧ್ಯಾತ್ಮಿಕ, ಸಾಮಾಜಿಕ ಮೌಲ್ಯ, ಕೌಟುಂಬಿಕ ಮೌಲ್ಯಗಳನ್ನು ಮತ್ತೆ ಪುನರುಜ್ಜಿನಗೊಳಿಸುವಲ್ಲಿ ಮಠಗಳ ಪಾತ್ರ ದೊಡ್ಡದಿದೆ. ಒಂದು ಮಠ ಊರೊಳಗೆ ಇದ್ದರೆ ಅಲ್ಲಿ ಮಠಾಧಿಕಾರಿ ಒಬ್ಬ ಗುರುವಾಗಿ ಆ ಊರಿನ ಯಾವುದೇ ಸಮಸ್ಯೆ ಬಂದರು ಕೂಡಾ ಅವುಗಳನ್ನು ಪರಿಹರಿಸಿ ಅವರಿಗೆ ಆರ್ಶೀವಾದ ಮಾಡುವಂತಹ ಪರಂಪರೆ ಇತ್ತು. ಇನ್ನು ನಮ್ಮ ದೇಶದಲ್ಲಿರುವ ಪ್ರತಿಯೊಂದು ಮಠ, ಮಂದಿರಗಳು ಕೂಡಾ ಒಂದು ಕಾಲದಲ್ಲಿ ನ್ಯಾಯಾಧೀಶರಾಗಿ, ನ್ಯಾಯಾಲಯಗಳಾಗಿ ಕೆಲಸವನ್ನು ಮಾಡುತ್ತಿದ್ದವು. ಹಿಂದಿನ ಕಾಲದಲ್ಲಿ ಸರಕಾರಗಳು ಸರಕಾರಿ ಶಾಲೆಗಳನ್ನು ಪ್ರಾರಂಭ ಮಾಡದೆ ಇದ್ದ ಸಂದರ್ಭದಲ್ಲೂ ಕೂಡಾ ಮಠ, ಮಂದಿರಗಳು ಶಿಕ್ಷಣ ನೀಡುವ ಸಂಸ್ಥೆಗಳಾಗಿ, ಶಾಲೆ, ನ್ಯಾಯಾಲಗಳಾಗಿ ನ್ಯಾಯದಾನವನ್ನು ಒದಗಿಸುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ಪದ್ಧತಿ ಮರೆಯಲು ಸಾಧ್ಯವಿಲ್ಲ ಎಂದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಶ್ರೀ ಗುರು ಚನ್ನಬಸವೇಶ್ವರ ಹಿರೇಮಠವನ್ನು ಪುನಃ ನಿರ್ಮಾಣ ಮಾಡಲು ಸಹಕರಿಸಿದ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಮತಗಿ ಹೊಳೆ ಹುಚ್ಚೇಶ್ವರ ಶ್ರೀ, ಗುಳೇದಗುಡ್ಡ ಅಭಿನವ ಒಪ್ಪತೇಶ್ವರ ಶ್ರೀ, ಗುಳೇದಗುಡ್ಡ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀ, ಹಿರೇಮಠದ ಶಿವಕುಮಾರ ಶ್ರೀ, ಕೈಲಾಸಪತಿ ಸ್ವಾಮೀಜಿ, ಬೇವೂರ ಗ್ಯಾನಪ್ಪಜ್ಜ, ಚಿಕ್ಕಮಾಣಿಕೇಶ್ವರಿ ತಾಯಿ, ಗುರು ಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ರಾಜೇಂದ್ರ ದುಗಾಣಿ, ಶಿವಾನಂದ ಶೆಲ್ಲಿಕೇರಿ, ಆರ್‌.ಎನ್.ಹೆರಕಲ್ ಹಾಗೂ ಶ್ರೀಮಠದ ಕಮಿಟಿ ಸದಸ್ಯರು, ಭಕ್ತ ಸಮೂಹ ಇದ್ದರು.