ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ: ಶಾಸಕ ವಿಜಯಾನಂದ ಕಾಶಪ್ಪನವರ

| Published : Jun 24 2024, 01:32 AM IST

ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ: ಶಾಸಕ ವಿಜಯಾನಂದ ಕಾಶಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಲ್‌ ಕೆರೂರಿನ ಗ್ರಾಮದ ಬಿಲ್ವಾಶ್ರಮ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ 43ನೆಯ ಪುಣ್ಯಾರಾಧನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಠಗಳು ಭಕ್ತರಲ್ಲಿ ಧಾರ್ಮಿಕ ಮನೋಭಾವ ಬೆಳೆಸುವುದರೊಂದಿಗೆ ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.

ಸಮೀಪದ ಬಿಲ್‌ ಕೆರೂರಿನ ಬಿಲ್ವಾಶ್ರಮ ಹಿರೇಮಠದಲ್ಲಿ ಜರುಗಿದ ಮೌನ ತಪಸ್ವಿ ಲಿಂ.ರುದ್ರಮುನಿ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ 43ನೆಯ ಪುಣ್ಯಾರಾಧನೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದಿನಿಂದಲೂ ಮಠಮಾನ್ಯಗಳು ಶಾಲೆಗಳನ್ನು ಹಾಗೂ ಉಚಿತ ಪ್ರಸಾದ ನಿಲಯಗಳನ್ನು ತೆರೆದು ಎಲ್ಲರಿಗೂ ಶಿಕ್ಷಣ ಹಾಗೂ ಅನ್ನದಾಸೋಹ ಸೇವೆ ಮಾಡುತ್ತಲೇ ಬಂದಿವೆ ಎಂದರು.

ಬಿಲ್ ಕೆರೂರ ಮಠದ ಸಿದ್ಧಲಿಂಗ ಶಿವಾಚಾರ್ಯ ಮಾತನಾಡಿ, ಶ್ರೀಗಳು ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಭಕ್ತಿಭಾವ ಮೂಡಿಸುವ ಜೊತೆಗೆ ಪ್ರಾಥಮಿಕ, ಪ್ರೌಢಶಾಲಾ ಹಂತದ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಇದು ಅವರಿಗೆ ಸಮಾಜದ ಬಗೆಗಿರುವ ಕಾಳಜಿ ತೋರಿಸುತ್ತದೆ ಎಂದು ಹೇಳಿದರು.

ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಎಮ್ಮಿಗನೂರಿನ ವಾಮದೇವ ಮಹಾಂತ ಶ್ರೀಗಳು, ಇಟಗಿಯ ಶ್ರೀಗಳು, ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಬರುವ ವರ್ಷ ಶ್ರೀಮಠದಲ್ಲಿ ರಥೋತ್ಸವ ನಡೆಯಲಿದ್ದು, ಹೊಸ ರಥದ ನಿರ್ಮಾಣ ನಡೆಯುತ್ತಿದೆ. ರಥ ನಿರ್ಮಾಣಕ್ಕೆ ನೆರವು ನೀಡಿದ ಮಹನೀವರಿಗೆ ಕೃತಜ್ಞತೆ ಸಲ್ಲಿಸಿದರು. ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯರು, ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ಬೀಳಗಿಯ ಗುರುಪಾದ ಶ್ರೀಗಳು, ಕುಂದರಗಿಯ ಸಂಗಮೇಶ್ವರ ಶ್ರೀಗಳು, ಬಾಗೇವಾಡಿಯ ಶಿವಪ್ರಕಾಶ ಶ್ರೀಗಳು, ಬೇವೂರಿನ ಗ್ಯಾನಪ್ಪಜ್ಜನವರು, ನೇಮಣ್ಣ ಮೇಲುಸಕ್ಕರೆ ಮತ್ತಿತರರು ಇದ್ದರು.

9 ಜೋಡಿಗಳ ಮದುವೆ: ನಂತರ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 9 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅನೇಕ ಜನ ಹರ-ಗುರು ಚರಮೂರ್ತಿಗಳು, ಗಣ್ಯರು ವಧು-ವರರಿಗೆ ಅಕ್ಷತೆ ಹಾಕಿ ಶುಭ ಕೋರಿದರು.