ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ವಿಶ್ವಗುರು ಬಸವಣ್ಣನವರ ಕಾಯಕ ಮಂತ್ರ, ದಾಸೋಹ ಪರಂಪರೆಯನ್ನು ಮುಖ್ಯ ಧ್ಯೇಯವಾಗಿಸಿಕೊಂಡಿರುವ ವೀರಶೈವ ಲಿಂಗಾಯತ ಮಠಗಳು ದೇಶದ ಅಭಿವೃದ್ಧಿ, ಸಮಾಜ ಪರಿವರ್ತನೆಯಲ್ಲಿ ಅಪಾರ ಕೊಡುಗೆ ನೀಡುತ್ತಿವೆ ಎಂದು ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ಇಲ್ಲಿನ ಮೋಟಗಿ ಮಠದಲ್ಲಿ ಮಂಗಳವಾರ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮಗಳ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯ ಇತರೆ ಸಮುದಾಯಗಳ ಜೊತೆಗೆ ಅನ್ಯೋನ್ಯ ಭಾವನೆ ಹೊಂದಿದೆ. ಸಹಬಾಳ್ವೆಯ ಬದುಕು ಕಟ್ಟಿಕೊಳ್ಳಲು ಲಿಂಗಾಯತ ಮಠಗಳು ಪ್ರೇರಣೆಯಾಗಿವೆ. ಅಥಣಿಯ ಮೋಟಗಿಮಠ ಗಡಿನಾಡು ಕನ್ನಡದ ಗುಡಿಯಾಗಿ ನಾಡು-ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಜನರಲ್ಲಿ ಆಧ್ಯಾತ್ಮದ ಅರಿವು ಮೂಡಿಸುತ್ತಿರುವ ಮೋಟಗಿ ಮಠದ ಶ್ರೀಗಳ ಕಾಯಕ ಮೆಚ್ಚುವಂತಹದ್ದು, ಶ್ರೀಮಠದ ಚೇತನ ಲಿಂ.ಚನ್ನಬಸವ ಶಿವಯೋಗಿಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪ ಹೊಂದಿದ್ದಾರೆ. ವಿಶ್ವಕನ್ನಡ ಸಮ್ಮೇಳನ ಮಾದರಿಯಲ್ಲಿ ನಡೆಯುವ ಈ ಕಾರ್ಯಕ್ರಮಗಳು ಯಶಸ್ವಿಯಾಗಲು ಭಕ್ತರ ಸಹಾಯ ಸಹಕಾರ ಅಗತ್ಯ. ಚನ್ನಬಸವ ಶಿವಯೋಗಿಗಳನ್ನು ನಾವು ನೀವು ಕಂಡಿಲ್ಲ, ಆದರೆ ಅವರ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮಗಳ ಮೂಲಕ ಅವರನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ನೇತೃತ್ವ ವಹಿಸಿದ್ದ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಗುರುಬಸವೇಶ್ವರ ಗುರುಬಸವೇಶ್ವರ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ, ಗುರು ಚನ್ನಬಸವೇಶ್ವರ ಗ್ರಂಥಮಾಲೆಯ ಅಮೃತ ಮಹೋತ್ಸವ ಹಾಗೂ ಲಿಂ. ಚನ್ನಬಸವ ಶಿವಯೋಗಿಗಳ ಶತಮಾನೋತ್ಸವ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಜರುಗುಲಿವೆ. ಮಹಾತ್ಮರ ಚರಿತಾಮೃತ ಗ್ರಂಥ ಈಗಾಗಲೇ 10ನೇ ಆವೃತ್ತಿ ಮುದ್ರಣಗೊಂಡಿದ್ದು, 11ನೇ ಆವೃತ್ತಿ ಆಂಗ್ಲ ಭಾಷೆಯಲ್ಲಿ ಅನುವಾದಗೊಂಡು ಬಿಡುಗಡೆಯಾಗಲಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಕೀಲ ಬಿ.ಎಲ್. ಪಾಟೀಲ ಮಾತನಾಡಿ, ಮೋಟಗಿ ಮಠದಲ್ಲಿ ಜರುಗುವ ಈ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಥಣಿಯ ಸದ್ಭಕ್ತರು ತನು, ಮನ, ಧನ ಸಹಕಾರ ನೀಡಬೇಕೆಂದರು.
ಮುದುಗಲ್ಲದ ಮಹಾಂತ ಸ್ವಾಮೀಜಿ,ಮಾಜಿ ಶಾಸಕರಾದ ಶಹಜಹಾನ ಡೊಂಗರಗಾoವ, ಮಹೇಶ ಕುಮಟಳ್ಳಿ, ಮುಖಂಡರಾದ ಗಜಾನನ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಶಿವಶಂಕರ ಹಂಜಿ, ಮುರಿಗೆಪ್ಪ ತೊದಲಬಾಗಿ, ರಮೇಶ ಶಿಂದಗಿ, ಗಿರೀಶ ಬುಠಾಳಿ , ರಮೇಶಗೌಡ ಪಾಟೀಲ, ಮುರುಗೇಶ ಬಾನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.