ಸಾಮಾಜಿಕ ಅಭಿವೃದ್ಧಿಗೆ ಪತ್ರಿಕೆಗಳ ಕೊಡುಗೆ ಅಪಾರ

| Published : Jul 23 2025, 01:47 AM IST

ಸಾರಾಂಶ

ಪತ್ರಿಕೆಗಳು ಸಾಮಾಜಿಕ ವಿಷಯದ ಮೇಲೆ ಬೆಳಕು ಚೆಲ್ಲುತ್ತವೆ. ಸಾಮಾಜಿಕ ಜಾಗೃತಿ ಹಾಗೂ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯ ಮಾಡುತ್ತವೆ. ಪತ್ರಿಕೆ ಹಾಗೂ ಪತ್ರಕರ್ತರನ್ನು ಹೀಯಾಲಿಸುವ, ತೆಗಳುವ ಕಾರ್ಯ ಆಗಬಾರದು. ಪತ್ರಿಕೆ ಮುನ್ನಡೆಸುವ ಕಾರ್ಯ ಸಾಮಾನ್ಯವಾದದ್ದಲ್ಲ.

ಕುಕನೂರು:

ಪತ್ರಿಕೆಗಳಿಂದ ಸಾಮಾಜಿಕ ಸ್ಥಿರತೆ ಸಾಧ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪತ್ರಿಕೆಗಳು ಸಾಮಾಜಿಕ ವಿಷಯದ ಮೇಲೆ ಬೆಳಕು ಚೆಲ್ಲುತ್ತವೆ. ಸಾಮಾಜಿಕ ಜಾಗೃತಿ ಹಾಗೂ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯ ಮಾಡುತ್ತವೆ. ಪತ್ರಿಕೆ ಹಾಗೂ ಪತ್ರಕರ್ತರನ್ನು ಹೀಯಾಲಿಸುವ, ತೆಗಳುವ ಕಾರ್ಯ ಆಗಬಾರದು. ಪತ್ರಿಕೆ ಮುನ್ನಡೆಸುವ ಕಾರ್ಯ ಸಾಮಾನ್ಯವಾದದ್ದಲ್ಲ ಎಂದರು.

ಇಂದು ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಪತ್ರಿಕೆ ಓದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೇರ್ಗಡೆಯಾಗಿ ಉತ್ತಮ ಜೀವನ ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.

ತಾಪಂ ಇಒ ಸಂತೋಷ ಬಿರಾದಾರ ಮಾತನಾಡಿ, ಪತ್ರಿಕೆಗಳು ಜ್ಞಾನಾರ್ಜನೆ ಸಂಕೇತ. ನಿತ್ಯ ನಡೆಯುವ ವಿಷಯಗಳನ್ನು ಇದ್ದಲ್ಲಿಗೆ ತಲುಪಿಸುತ್ತವೆ. ಪತ್ರಕರ್ತರು ಹಾಗೂ ಸಂಪಾದಕೀಯ ಮಂಡಳಿ ಹಗಲು, ರಾತ್ರಿ ಜರುಗುವ ವಿಷಯಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಾರೆ ಎಂದರು.

ಸಾಹಿತಿ ಕೆ.ಬಿ. ಬ್ಯಾಳಿ ಮಾತನಾಡಿ, ಪತ್ರಕರ್ತರು, ರಾಜಕಾರಣಿಗಳು ಸಾಹಿತ್ಯವನ್ನು ಓದಬೇಕು. ಓದಿದಾಗ ಮಾತ್ರ ಉತ್ತಮ ಬರವಣಿಗೆ ಸಾಧ್ಯವೆಂದರು.

ಪಪಂ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್ಲ, ಪಪಂ ಅಧ್ಯೆಕ್ಷೆ ಲಲಿತಮ್ಮ ಯಡಿಯಾಫೂರ, ಉಪಾಧ್ಯಕ್ಷ ಪ್ರಶಾಂತ ಆರಬೆಳಿನ್, ಸಂಘದ ರಾಜ್ಯ ವಿಶೇಷ ಆಹ್ವಾನಿತ ಸದಸ್ಯ ಹರೀಶ, ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ಕಾರ್ಯದರ್ಶಿ ನಾಗರಾಜ, ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಜಿ.ಎಸ್. ಗೋನಾಳ, ತಾಲೂಕಾಧ್ಯಕ್ಷ ನಾಗರಾಜ ಬೆಣಕಲ್, ಪತ್ರಕರ್ತರು, ಶಿಕ್ಷಕರು ಇತರರಿದ್ದರು.ಮಕ್ಕಳಿಗೆ ಬಹುಮಾನ ವಿತರಣೆ

ಪ್ರಬಂಧ ಸ್ಪರ್ಧೆ ಮಕ್ಕಳ ಬರವಣಿಗೆ ಹಾಗೂ ವಿಚಾರಗಳ ಕೌಶಲ್ಯ ಅನಾವರಣಕ್ಕೆ ಸೂಕ್ತ ವೇದಿಕೆ ಎಂದು ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ದೇವರು ಹೇಳಿದರು. ಪತ್ರಿಕಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಕವಾಗಿರುವ ಕೌಶಲ್ಯಗಳನ್ನು ಹೆಕ್ಕಿ ತೆಗೆಯುವ ಕೆಲಸ ಆಗಬೇಕು ಎಂದರು. ಪ್ರಬಂಧ ಸ್ಪರ್ಧೆಯಲ್ಲಿ 45 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಭಿನಯ, ಪದ್ಮಾವತಿ ಪ್ರಥಮ, ಜ್ಯೋತಿ ದ್ವಿತೀಯ, ತನುಶ್ರೀ, ಭಾನುಪ್ರಿಯ ತೃತೀಯ ಸ್ಥಾನ ಪಡೆದರು. ಪತ್ರಕರ್ತ ಮುರಾರಿ ಭಜಂತ್ರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪತ್ರಕರ್ತ ವೀರೇಶ ಇಟಗಿ ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ವೈಯಕ್ತಿಕ ಬಹುಮಾನ ವಿತರಿಸಿದರು.