ಸಾರಾಂಶ
ಕ್ಯಾ.ಬ್ರಿಜೇಶ್ ಚೌಟ ಓದುತ್ತಿದ್ದಾಗ ಪ್ರಾಂಶುಪಾಲರಾಗಿದ್ದ ಫಾ.ಪ್ರಶಾಂತ್ ಮಾಡ್ತಾ ಅವರು ಸಂಸದರನ್ನು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಪದವಿ ಪೂರ್ವ ಹಾಗೂ ಬಿಎಸ್‌ಸಿ ಪದವಿ ವಿದ್ಯಾಭ್ಯಾಸ ನಡೆಸಿದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ದ.ಕ. ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಗುರುವಾರ ಕಾಲೇಜಿನಲ್ಲಿ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕ್ಯಾ.ಬ್ರಿಜೇಶ್ ಚೌಟ ಓದುತ್ತಿದ್ದಾಗ ಪ್ರಾಂಶುಪಾಲರಾಗಿದ್ದ ಫಾ.ಪ್ರಶಾಂತ್ ಮಾಡ್ತಾ ಅವರು ಸಂಸದರನ್ನು ಸನ್ಮಾನಿಸಿ ಮಾತನಾಡಿದರು. ಸನ್ಮಾನಕ್ಕೆ ಉತ್ತರಿಸಿದ ಕ್ಯಾ.ಬ್ರಿಜೇಶ್ ಚೌಟ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು ನನ್ನ ಭಾಗ್ಯ. ಮಾಜಿ ರಕ್ಷಣಾ ಸಚಿವ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರಿಂದ ಪಡೆದ ಸ್ಫೂರ್ತಿಯಿಂದ ನಾನು ಸೈನ್ಯಕ್ಕೆ ಸೇರುವಂತಾಯಿತು. ಅವರು ಕೂಡ ಅಲೋಶಿಯನ್ ಆಗಿದ್ದರು. ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಮಾಜ ಮತ್ತು ರಾಷ್ಟ್ರದ ಯಶಸ್ಸಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭ ಸೇಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಮೆಲ್ವಿನ್ ಪಿಂಟೋ, ಸೇಂಟ್ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಫಾ. ಪ್ರವೀಣ್ ಮಾರ್ಟಿಸ್, ಎಸ್‌ಎಸಿಎಎ ಅಧ್ಯಕ್ಷ ಸುನಿಲ್ ಕುಂದರ್, ಸೇಂಟ್ ಅಲೋಶಿಯಸ್ ಸಂಸ್ಥೆಗಳ ಐಡಿಒ ಶಿಲ್ಪಾ ಡಿಸೋಜಾ, ರಿಜಿಸ್ಟ್ರಾರ್‌ಗಳಾದ ಡಾ. ಅಲ್ವಿನ್ ಡಿಸಾ ಮತ್ತು ಡಾ. ರೊನಾಲ್ಡ್ ನಝರತ್ ಮತ್ತಿತರರಿದ್ದರು.