ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಆರಂಭವಾದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.

ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರವಿದೆ. ಕಾರ್ಮಿಕರು ಇಲ್ಲದ ದೇಶ ಊಹಿಸಲು ಸಾಧ್ಯವಿಲ್ಲ.ಕಾರ್ಮಿಕರಿಗಾಗಿಯೇ ಜಗತ್ತಿನಾದ್ಯಂತ ಈ ದಿನ ಆಚರಿಸಲಾಗುತ್ತಿದೆ ಎಂದರು.

ನರೇಗಾ ಯೋಜನೆಯಡಿ ಕೈಗೊಳ್ಳುವ ಸಾಮೂಹಿಕ ಕಾಮಗಾರಿಗಳಿಗೆ ಎನ್ಎಂಎಂಎಸ್ ಹಾಜರಾತಿ ಮೂಲಕ ವೈಯಕ್ತಿಕ ಫೋಟೋ ತೆಗೆದುಕೊಳ್ಳಲಾಗುತ್ತಿದೆ.ಕೆಲಸಕ್ಕೆ ಬರುವ ಪ್ರತಿಯೊಬ್ಬರೂ ಫೋಟೋ ತೆಗೆಸಿಕೊಂಡಲ್ಲಿ ವೇತನ ಸಮಸ್ಯೆ ಬರುವುದಿಲ್ಲ.ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಫೋಟೋ ತೆಗೆಸಿಕೊಂಡು ಕೆಲಸ ಮಾಡಬೇಕೆಂದು ತಿಳಿಸಿದರು.

ಕೂಲಿಕಾರರು ಗುಳೆ ಹೊಗುವುದನ್ನು ತಡೆಗಟ್ಟಿ ತಮ್ಮ ತಮ್ಮ ಹಳ್ಳಿಯಲ್ಲಿಯೇ ಕೆಲಸ ಕೊಡಲಾಗುತ್ತಿದೆ.ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಈಗ ಬೇಸಿಗೆ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.ನೀರು ಸರಿಯಾಗಿ ಕುಡಿಯಬೇಕು.ಆರೋಗ್ಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಯೋಜನೆಯಲ್ಲಿ ಆದ ಹೊಸ ಬದಲಾವಣೆ ಹಾಗೂ ಹಾಜರಾತಿ ಕುರಿತು ಮಾಹಿತಿ ತಿಳಿಸಿದರು.

ಇದೇ ವೇಳೆ ಕಾರ್ಮಿಕ ದಿನಾಚರಣೆಯನ್ನು ಕೂಲಿಕಾರರಿಂದ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಗ್ರಾಮ ಕಾಯಕ ಮಿತ್ರರಾದ ಮಂಜುಳಾ ವಾಲ್ಮಿಕಿ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.