ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ದೇಶದ ಅಭಿವೃದ್ಧಿಗೆ ಕಾರ್ಮಿಕ ವರ್ಗದ ಕೊಡುಗೆ ಮಹತ್ವವಾಗಿದ್ದು, ಕಾರ್ಮಿಕರು ಸಂಘಟನೆ ಮೂಲಕ ಸರ್ಕಾರದ ಸೌಲಭ್ಯವನ್ನು ಪಡೆದು ಸಬಲರಾಗಲು ಅಗತ್ಯವಾದ ಕಾರ್ಮಿಕರ ಭವನ ನಿರ್ಮಾಣಕ್ಕೆ ಎಲ್ಲ ರೀತಿಯಲ್ಲಿ ಸ್ಪಂದಿಸುವುದಾಗಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಭರವಸೆ ನೀಡಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರ ಸಹಿತ ಎಲ್ಲ ರೀತಿಯ ಕಾರ್ಮಿಕರು ಶ್ರಮ ಜೀವಿಯಾಗಿದ್ದು, ನಿತ್ಯ ಬೆವರು ಸುರಿಸಿ ದುಡಿಯುವ ಕಾರ್ಮಿಕರು ದೇಶದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.ಕಾರ್ಮಿಕರ ನೆಮ್ಮದಿಯ ಬದುಕಿಗಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಜನತೆ ತತ್ತರಿಸಿದಾಗ ದೇಶದಲ್ಲಿಯೇ ಕಾರ್ಮಿಕರಿಗಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಿದ ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ ಎಂದು ಹೇಳಿದರು.
ತಾಲೂಕಿನಾದ್ಯಂತ 20 ಸಾವಿರ ಅಧಿಕ ಕಾರ್ಮಿಕರು ಇಲಾಖೆಯಡಿ ನೋಂದಣಿಯಾಗಿದ್ದು, ತಾಲೂಕಿನಲ್ಲಿ ಎಲ್ಲ ಸಮುದಾಯಕ್ಕೆ ಪ್ರತ್ಯೇಕ ಸಮುದಾಯ ಭವನವನ್ನು ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.ಯಡಿಯೂರಪ್ಪನವರು ಬಡವರ, ರೈತರ ಹಾಗೂ ಕೂಲಿ ಕಾರ್ಮಿಕರ ಮದ್ಯೆ ಇದ್ದು ಅವರ ಸಮಸ್ಯೆ ಪರಿಹಾರಕ್ಕೆ ಹೋರಾಟದ ಮೂಲಕ ಜನನಾಯಕರಾಗಿ ರೂಪುಗೊಂಡು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಇದೀಗ ಕ್ಷೇತ್ರದ ಶಾಸಕರಾಗಿ ಕಾರ್ಮಿಕರ ಎಲ್ಲ ಸಮಸ್ಯೆಗೆ ಸ್ಪಂದಿಸಬೇಕಾದ ಕರ್ತವ್ಯ ನಮ್ಮದಾಗಿದೆ ಎಂದು ವಿಜಯೇಂದ್ರ ಹೇಳಿದರು.
ಈ ವೇಳೆ ಆಯ್ದ ಕಾರ್ಮಿಕರಿಗೆ ಟೂಲ್ಸ್ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಂಘದ ಗೌರವಾಧ್ಯಕ್ಷ ಮಹದೇವಾಚಾರ್ ವಹಿಸಿ ಮಾತನಾಡಿದರು.ತಾಲೂಕು ಘಟಕದ ಅಧ್ಯಕ್ಷ ಮುನಿರತ್ನ, ಉಪಾಧ್ಯಕ್ಷ ಬಸವರಾಜ್ ಸೊಪ್ಪಿನಕೇರಿ, ಚೂರಿ ಗಿಡ್ಡಪ್ಪ, ಸಲೀಂ, ಸುರೇಶ್, ಬಾಪೂಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪಾಪಯ್ಯ ಕಾರ್ಮಿಕ ಇಲಾಖೆಯ ಶಿಲ್ಪ ಇದ್ದರು.