ಸಾರಾಂಶ
ಚನ್ನಪಟ್ಟಣ: ಆರ್ಥಿಕ ಪ್ರಗತಿಗೆ ಶ್ರಮಿಕ ವರ್ಗವಾಗಿರುವ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಆದರೆ, ಸರ್ಕಾರಗಳಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗದ ಕಾರಣ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ. ತಮ್ಮ ಸಮಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಮಿಕರು ಸಂಘಟಿತರಾಗುವ ಅಗತ್ಯವಿದೆ ಎಂದು ಟೋಯೋಟಾ ಸಂಸ್ಥೆಯ ಪಿ. ಶ್ರೀಕಾಂತ್ ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಇಂದು ಸರ್ಕಾರಗಳಿಗೆ ಆದಾಯದ ಮೂಲ ದೊಡ್ಡ ಸಂಸ್ಥೆಗಳಿರಬಹುದು. ಸಂಸ್ಥೆಗಳ ಉತ್ಪನ್ನಗಳನ್ನು ತಯಾರಿಸುವ ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕರ ಶ್ರಮ ಹೆಚ್ಚಿದೆ. ಸರ್ಕಾರಗಳು ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ಕಾರ್ಮಿಕರಿಗೆ ಸಿಗಬೇಕಾದ ಮೂಲ ಸೌಲಭ್ಯಗಳನ್ನು ಪಡೆಯುವ ಕಾರ್ಮಿಕರು ಸಂಘಟಿತರಾಗಬೇಕಿದೆ ಎಂದರು.ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕರ್ಣ ಮಾತನಾಡಿ, ಇಂದು ಎಷ್ಟೋ ಕಡೆ ಕಾರ್ಮಿಕರಿಗೆ ನಿಗದಿತ ದಿನದ ಕೂಲಿ ಇಲ್ಲವಾಗಿದೆ. ಶ್ರಮಿಕ ವರ್ಗಕ್ಕೆ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಕಾರ್ಮಿಕರಿಗೆ ಸೂಕ್ತ ವೇತನ, ಮಾಸಾಶನ ಸೌಲಭ್ಯ ಸೇರಿದಂತೆ ಕುಟುಂಬಕ್ಕೆ ಆರೋಗ್ಯ ವಿಮಾ ಯೋಜನೆಗಳನ್ನು ನೀಡುವ ಬಗ್ಗೆ ಸರ್ಕಾರಗಳು ಚಿಂತನೆ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟಗಳನ್ನು ಎದುರಿಸಬೇಕಿದೆ ಎಂದರು.
ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಒಬ್ಬರ ಶ್ರೀಮಂತಿಕೆ ಹಿಂದೆ ಹಲವು ಕಾರ್ಮಿಕರ ಶ್ರಮ ಇರುತ್ತದೆ. ನಾವೊಂದು ಸುಂದರ ಕಟ್ಟಡ ನೋಡಲಿ, ಸುಂದರ ವಾಹನವನ್ನು ನೋಡಿದರೆ ಅಬ್ಬಾ ಎಷ್ಟು ಚಂದ ಇದೆ ಎನ್ನುತ್ತೇವೆ. ಆದರೆ ಆ ಕಟ್ಟಡ ನಿರ್ಮಾಣ ಮಾಡಿದ ಕಾರ್ಮಿಕರು ಕಾರು ತಯಾರಿಸಿದ ಕಾರ್ಮಿಕರನ್ನು ನೆನೆಯುವುದೇ ಇಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕರಿಗಾಗಿ ಒಂದು ದಿನ ಮೀಸಲಿಟ್ಟು ಮೇ ೧ರಂದು ಕಾರ್ಮಿಕ ದಿನಾಚರಣೆ ಮಾಡಲಾಗುತ್ತಿದ್ದು ಕಾರ್ಮಿಕರ ಶ್ರಮಕ್ಕೆ ಇನ್ನು ಸೂಕ್ತ ಗೌರವ ಸಿಗಬೇಕಿದೆ ಎಂದರು.ಈ ವೇಳೆ ಕಾರ್ಮಿಕರಿಗೆ ಪುಷ್ಪಾರ್ಚನೆ ಮಾಡಿ, ಸಿಹಿ ತಿನ್ನಿಸಿ ಅಭಿನಂದಿಸಲಾಯಿತು. ಹನುಂತನಗರದ ವೆಂಕಟರಮಣ, ಭರಣ್, ಚಿಕ್ಕಣ್ಣಪ್ಪ, ಆರ್.ಶಂಕರ್, ದೊಡ್ಡ ದೇವೇಗೌಡ, ರಮೇಶ್ ಮತ್ತಿತರರಿದ್ದರು.
ಪೊಟೋ೨ಸಿಪಿಟಿ೫: ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರನ್ನು ಅಭಿನಂದಿಸಲಾಯಿತು.