ಬಾಲಕಾರ್ಮಿಕ ಪದ್ಧತಿ ನಿಯಂತ್ರಿಸದಿದ್ದರೆ ಅಧಿಕಾರಿಗಳೇ ಹೊಣೆಗಾರರು

| Published : Oct 08 2023, 12:00 AM IST

ಬಾಲಕಾರ್ಮಿಕ ಪದ್ಧತಿ ನಿಯಂತ್ರಿಸದಿದ್ದರೆ ಅಧಿಕಾರಿಗಳೇ ಹೊಣೆಗಾರರು
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಂತೋಷ ಲಾಡ್ ಅವರು ಬಾಲ ಕಾರ್ಮಿಕ ಪದ್ಧತಿ ನಿಯಂತ್ರಿಸದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಸಿದರು.

ಬಳ್ಳಾರಿ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕು. ಇಲ್ಲವಾದರೆ ಅಧಿಕಾರಿಗಳನ್ನೇ ಹೊಣೆಯನ್ನಾಗಿಸಿ ಮುಂದಿನ ಹಂತದ ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಕೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಇಲಾಖೆಯ ಯೋಜನೆಗಳ ಸಮರ್ಪಕ ಜಾರಿಗೆ ಮುತುವರ್ಜಿ ಕೆಲಸ ಮಾಡಬೇಕು. ಯಾವುದೇ ನೆಪಗಳನ್ನು ಹೇಳುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬಹಳಷ್ಟು ಸಣ್ಣ ಉದ್ದಿಮೆಯ ಅಂಗಡಿ, ಹೋಟೆಲ್ ಮತ್ತು ವಾಣಿಜ್ಯ ಮಳಿಗೆಗಳು ಟ್ರೇಡ್ ಲೈಸೆನ್ಸ್ ಪಡೆಯದೆ ನೋಂದಣಿಯಾಗದೆ ಇದ್ದಲ್ಲಿ ಅಂತಹ ಕಡೆಗೆ ಭೇಟಿ ನೀಡಿ, ಪರಿಶೀಲಿಸಿ ನೋಂದಣಿ ಕಾರ್ಯ ಕೈಗೊಳ್ಳಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳು, ಕಾರ್ಮಿಕ ಇಲಾಖಾ ಕೋರ್ಟ್ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಬೇಕು. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಕಾರ್ಮಿಕ ಕಾರ್ಡ್‍ಗಳನ್ನು ಪಡೆದವರನ್ನು ಗುರುತಿಸಿ ಕೂಡಲೇ ರದ್ದುಗೊಳಿಸಬೇಕು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ ನೋಂದಣಿ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ, ಹೆರಿಗೆ ಸಹಾಯಧನ, ಮದುವೆ ಸಹಾಯಧನ ಸೇರಿದಂತೆ ವಿವಿಧ ಅರ್ಜಿಗಳನ್ನು ತಕ್ಷಣ ವಿಲೇವಾರಿಗೊಳಿಸಬೇಕು ಎಂದು ಸೂಚಿಸಿದರು.ಇದೇ ವೇಳೆ ಕಾರ್ಮಿಕ ಇಲಾಖೆಯ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಸಂತೋಷ್ ಲಾಡ್, "ತಾವು ಬೆಳಗ್ಗೆಯಿಂದ ಕಚೇರಿಯಲ್ಲಿ ಕುಳಿತು ಏನು ಮಾಡುತ್ತೀರಿ? ಕಳೆದ ಮೂರು ತಿಂಗಳಲ್ಲಿ ಎಷ್ಟು ಅರ್ಜಿಗಳು ವಿಲೇವಾರಿ ಮಾಡಿದ್ದೀರಿ? ಏನೇನು ಕೆಲಸ ಮಾಡಿದ್ದೀರಿ? ನೀವು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದರೆ ಪ್ರಗತಿಯ ಹಿನ್ನಡೆ ಕಾರಣ ಏನು ಎಂದು ಪ್ರಶ್ನಿಸಿದರಲ್ಲದೆ, ಅರ್ಹ ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ನಿಮ್ಮ ಹಾಗೂ ನಮ್ಮ ಜವಾಬ್ದಾರಿ. ಈ ವಿಚಾರದಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡು ಬಂದರೆ ಸುಮ್ಮನಿರಲ್ಲ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತರಾದ ಗೋಪಾಲಕೃಷ್ಣ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಭಾರತಿ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ವರದ್‍ರಾಜ್ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.