ಸಾರಾಂಶ
ವಾಯು ಮಾಲಿನ್ಯ ನಿಯಂತ್ರಣ-ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ: ಪ್ರಹ್ಲಾದ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಾಲಿನ್ಯ ನಿಯಂತ್ರಣ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅಧೀಕ್ಷಕ ಪ್ರಹ್ಲಾದ್ ಹೇಳಿದರು.
ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ನಡೆದ ವಾಯು ಮಾಲಿನ್ಯ ಮಾಸಾಚರಣೆಯಲ್ಲಿ ಮಾತನಾಡಿ, ಪರಿಸರ ಸಮತೋಲನದಲ್ಲಿರಬೇಕು. ಇಲ್ಲವಾದಲ್ಲಿ ಅಸಮತೋಲನ ಉಂಟಾಗಿ ಅನೇಕ ಮಾರಕ ಕಾಯಿಲೆಗಳು ಉಲ್ಬಣಗೊಳ್ಳಲಿದೆ ಎಂದರು. ಉಪನ್ಯಾಸಕ ವಿಶ್ವನಾಥ್ ಮಾತನಾಡಿ, ಆಮ್ಲಜನಕವನ್ನು ದುಡ್ಡಿಗೆ ಖರೀದಿ ಮಾಡಿ ಬಳಸಿಕೊಳ್ಳುವ ಸಮಯ ದೂರ ಉಳಿದಿಲ್ಲ. ಈ ನಿಟ್ಟಿನಲ್ಲಿ ಆಮ್ಲಜನಕ ಹೆಚ್ಚಾಗಲು ಗಿಡಮರವನ್ನು ಹೆಚ್ಚೆಚ್ಚು ಬೆಳೆಸಿ, ಉಳಿಸಬೇಕು. ಕಾನೂನು ಇರುವುದು ಬೇರೆಯವರಿಗೆ ಹೇಳುವುದಕ್ಕೆ ಮಾತ್ರವಲ್ಲ. ನಾವು ಸಹ ಪಾಲಿಸಬೇಕು ಎಂದು ಸಲಹೆ ನೀಡಿದರು. ಅಪೂರ್ವ ಚಾಲನಾ ತರಬೇತಿ ಸಂಸ್ಥೆ ಮಾಲೀಕ ಅಪೂರ್ವ ರಾಘು ಮಾತನಾಡಿ, ಇಂದು ಎಲೆಕ್ಟ್ರಿಕ್ ವಾಹನಗಳಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇದರಿಂದ ವಾಯು ಮಾಲಿನ್ಯವನ್ನು ಶೇ.90 ರಷ್ಟು ಹತೋಟಿಗೆ ತರಬಹುದು ಎಂದರು. ಆಡಂ ಚಾಲನಾ ತರಬೇತಿ ಸಂಸ್ಥೆ ಮಾಲೀಕ ಮಾರ್ಟಿನ್ ಮಾತನಾಡಿ, ಸಾರಿಗೆ ಇಲಾಖೆ ಕಡ್ಡಾಯ ಚಿಹ್ನೆ ಮತ್ತು ಮುನ್ನೆಚ್ಚರಿಕೆ ಚಿಹ್ನೆಗಳನ್ನು ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಅಪಘಾತಗಳಿಗೆ ಕಡಿವಾಣ ಹಾಕಬಹುದಾಗಿದೆ. ಪಾದಚಾರಿಗಳು ಕಡ್ಡಾಯವಾಗಿ ರಸ್ತೆಯ ಬಲ ಭಾಗ ದಲ್ಲಿಯೇ ಸಂಚರಿಸಬೇಕು. ವಾಹನಗಳು ರಸ್ತೆಯ ಎಡಭಾಗದಲ್ಲಿ ಸಂಚರಿಸಬೇಕು. ಹಿಂಬದಿ ವಾಹನ ಸವಾರರು ಮುಂದೆ ಹೋಗುತ್ತಿರುವ ವಾಹನ ಸವಾರರ ಕೈ ಚಿಹ್ನೆಗಳನ್ನು ಗಮನಿಸುತ್ತಿರಬೇಕು. ವಾಯು ಮಾಲಿನ್ಯ ಬಗ್ಗೆ ಪ್ರಾದೇಶಿಕ ಸಾರಿಗೆ ಸಂಸ್ಥೆ ಹಮ್ಮಿಕೊಂಡಿರುವ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಅತ್ಯಂತ ಅರ್ಥಗರ್ಭಿತವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ವಾಯು ಮಾಲಿನ್ಯ ನಿಯಂತ್ರಣ ಬಗ್ಗೆ ಅರಿವಿನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ಆಯೋಜಿಸುವ ಮೂಲಕ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನಾಂದಿ ಹಾಡಬೇಕೆಂದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ತಾಂತ್ರಿಕ ಸಹಾಯಕ ಎಚ್.ಜಿ.ಸಂತೋಷ್, ಸಹನಾ, ಸ್ವಾತಿ, ಸಂತೋಷ್ ,ಪಂಚಮಿ ಉಪಸ್ಥಿತರಿದ್ದರು.