ಸಾರಾಂಶ
ಕನ್ನಡ ಪ್ರಭ ವಾರ್ತೆ ಮದ್ದೂರು
ತಾಲೂಕಿನಲ್ಲಿ ಡೆಂಘೀ ಜ್ವರದ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಅಧಿಕಾರಿಗಳ ಕ್ರಮ ಶ್ಲಾಘನೀಯವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಡೆಂಘೀ ರೋಗದ ನಿಯಂತ್ರಣ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಆರೋಗ್ಯ ಇಲಾಖೆ, ಪುರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಡೆಂಘೀ ಜ್ವರ ನಿಯಂತ್ರದಲ್ಲಿದೆ. ಅಧಿಕಾರಿಗಳು ಡೆಂಘೀ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು. ಪ್ರತಿದಿನ ಮನೆ ಮನೆಗೆ ತೆರಳಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಪಟ್ಟಣ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತೆ ಬಗ್ಗೆ ಪುರಸಭೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಜಡತ್ವ ಬಿಟ್ಟು ಪಟ್ಟಣದ ಸ್ವಚ್ಛತೆ ಕುರಿತಂತೆ ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು ಎಂದರು.ಮುಂದಿನ ದಿನಗಳಲ್ಲಿ ತಾವು ಪಟ್ಟಣ ವ್ಯಾಪ್ತಿಗಳಲ್ಲಿ ಸಂಚಾರ ನಡೆಸಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸುವುದರ ಜೊತೆಗೆ ಡೆಂಘೀ ನಿಯಂತ್ರಣ ದಲ್ಲಿ ಸಾರ್ವಜನಿಕರ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ರವೀಂದ್ರ ಬಿ.ಗೌಡ ಮಾತನಾಡಿ, ಜನವರಿಯಿಂದ ಜುಲೈ ಅಂತ್ಯದವರೆಗೆ ತಾಲೂಕಿನಲ್ಲಿ 75 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ರೋಗಿಗಳು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮೋಹನ್, ಗ್ರೇಟ್ -2 ತಹಸೀಲ್ದಾರ್ ಸೋಮಶೇಖರ್, ಡೆಂಘೀ ಮತ್ತು ಮಲೇರಿಯಾ ನಿಯಂತ್ರಣಧಿಕಾರಿ ಡಾ.ಕಾಂತರಾಜು, ನೋಡಲ್ ಅಧಿಕಾರಿ ಡಾ.ಬೆಟ್ಟಸ್ವಾಮಿಗೌಡ, ಮದ್ದೂರು ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಬಾಲಕೃಷ್ಣ, ಬಿಇಒ ಸಿ. ಕಾಳಿರಯ್ಯ. ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.