ವರ್ತಮಾನದಲ್ಲಿ ಜನರಾಡುವ ಭಾಷೆಯಂತೆಯೇ ಸಾಹಿತ್ಯದ ಭಾಷೆಯ ಕುರಿತಾಗಿ ಮಾತನಾಡುವಾಗಲೂ ಆತಂಕ ಪಡುವ ಸ್ಥಿತಿಯಲ್ಲಿ ನಾವಿದ್ದೇವೆ. ಸಾಂದರ್ಭಿಕವಾಗಿ ಬಳಸುವ ಭಾಷೆಯ ಮೇಲೆ ನಿಯಂತ್ರಣ ಹೇರುವ ಪ್ರವೃತ್ತಿಯಿಂದಾಗಿ ಸಾಹಿತ್ಯದ ಭಾಷೆ ನಲುಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಜಿ.ಎಸ್. ಭಟ್ಟ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಾಗರ

ವರ್ತಮಾನದಲ್ಲಿ ಜನರಾಡುವ ಭಾಷೆಯಂತೆಯೇ ಸಾಹಿತ್ಯದ ಭಾಷೆಯ ಕುರಿತಾಗಿ ಮಾತನಾಡುವಾಗಲೂ ಆತಂಕ ಪಡುವ ಸ್ಥಿತಿಯಲ್ಲಿ ನಾವಿದ್ದೇವೆ. ಸಾಂದರ್ಭಿಕವಾಗಿ ಬಳಸುವ ಭಾಷೆಯ ಮೇಲೆ ನಿಯಂತ್ರಣ ಹೇರುವ ಪ್ರವೃತ್ತಿಯಿಂದಾಗಿ ಸಾಹಿತ್ಯದ ಭಾಷೆ ನಲುಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಜಿ.ಎಸ್. ಭಟ್ಟ ಅಭಿಪ್ರಾಯಪಟ್ಟರು.

ಇಲ್ಲಿನ ಪರಸ್ಪರ ಸಾಹಿತ್ಯ ವೇದಿಕೆಯು ಪುಸ್ತಕ ಪ್ರಾಧಿಕಾರ ಬೆಂಗಳೂರು, ಸರ್ಕಾರಿ ಪಿಯು ಕಾಲೇಜು ಸಾಗರ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯದ ಭಾಷೆ ವಿಷಯವಾಗಿ ಉಪನ್ಯಾಸ ನೀಡಿದ ಅವರು, ಸಾಹಿತ್ಯದ ಭಾಷೆಯ ಮೇಲೆ ನಿಯಂತ್ರಣ ಹೇರುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಸಾಹಿತ್ಯದ ಭಾಷೆಯ ಮೇಲೆ ನಿಯಂತ್ರಣ ಹೇರುವುದರಿಂದ ಲೇಖಕ ತನ್ನ ಅಭಿವ್ಯಕ್ತಿಯನ್ನು ಸಮರ್ಥವಾಗಿ ನಿರೂಪಿಸಲು ಸಾಧ್ಯವಾಗುವುದಿಲ್ಲ. ಆಡು ಭಾಷೆ ಸಾಹಿತ್ಯದ ಭಾಷೆಯಾಗಿ ಪರಿವರ್ತನೆಯಾಗುವ ವಿಸ್ಮಯವನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗ್ರಹಿಸಬೇಕು. ವ್ಯಕ್ತಿನಿಷ್ಠ ಭಾವನೆಗಳನ್ನು ಕೃತಿಮೇಲೆ ತಲೆದೋರದಂತೆ ಭಾಷಾ ಪ್ರಯೋಗದಲ್ಲಿ ಸಹಜತೆಯನ್ನು ಕಾಪಾಡಿಕೊಳ್ಳುವುದು ಲೇಖಕನ ಮುಂದಿರುವ ಸವಾಲು ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಹಿರಿಯ ಲೇಖಕರಾದ ಲಕ್ಷ್ಮಣ್‌ ಕೊಡಸೆ ಮಾತನಾಡಿ, ಸೆಮಿಸ್ಟರ್ ಪದ್ಧತಿಯ ಶಿಕ್ಷಣ ಕ್ರಮದಿಂದಾಗಿ ವಿದ್ಯಾರ್ಥಿಗಳಲ್ಲಿ ಸೃಜಶೀಲತೆಯ ಅಭಿವ್ಯಕ್ತಿಗೆ ತೊಡಕಾಗುತ್ತಿದೆ. ಸೆಮಿಸ್ಟರ್ ಪೂರ್ವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಾಮಾಜಿಕ ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬೆಳೆದಿದ್ದಾರೆ. ಆದರೆ ಇಂದಿನ ಪರೀಕ್ಷಾ ಕೇಂದ್ರಿತ ಶಿಕ್ಷಣ ಕ್ರಮದಿಂದಾಗಿ ವಿದ್ಯಾರ್ಥಿಗಳು ಸಾಮಾಜಿಕ ಸಾಹಿತ್ತಿಕ ಸಾಮರಸ್ಯವನ್ನು ಸಾಧಿಸಲಾರದೆ ಸೋಲು ಅನುಭವಿಸುವುದನ್ನು ನಾವೆಲ್ಲಾ ಅಸಹಾಯಕರಾಗಿ ನೋಡುವಂತಾಗಿದೆ ಎಂದು ಹೇಳಿದರು.

ನಾನು ಮೆಚ್ಚಿದ ಪುಸ್ತಕ ಎಂಬ ವಿಷಯವಾಗಿ ಕವನ ಎಸ್. ಡಾ.ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ, ಯಶವಂತ ಕೆ. ಕುವೆಂಪುರವರ ಬೆರಳ್ಗೆ ಕೊರಳ್, ಕವನ ನಾಡಿಯವರ ಕುಂಜಾಲು ಕಣಿವೆಯ ಕೆಂಪು ಹೂ, ಪ್ರಾರ್ಥನಾ ಕೊಡಸೆ ತೇಜಸ್ವಿಯವರ ಕರ್ವಾಲೋ ಕೃತಿಗಳ ಕುರಿತು ಮಾತನಾಡಿದರು.

ಪರಸ್ಪರ ಸಾಹಿತ್ಯ ವೇದಿಕೆಯ ಡಾ.ಸರ್ಫ್ರಾಜ್ ಚಂದ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಕನ್ನಡ ಭಾಷಾ ಪತ್ರಿಕೆಯಲ್ಲಿ ಅತಿಹೆಚ್ಚು ಅಂಕ ಪಡೆದ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿದರು. ಡಾ. ಕೆ.ಎಸ್.ದೇವೇಂದ್ರ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಹರೀಶ್ ನಿರೂಪಿಸಿದರು.