ಸಾರಾಂಶ
ಕನ್ನಡ ಪ್ರಭ ವಾರ್ತೆ ತುಮಕೂರು
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರ ಪಾಲಿಕೆ ಸೂಕ್ತ ಕ್ರಮ ಕೈಗೊಂಡು ನಾಗರೀಕರಿಗೆ ನಾಯಿಗಳಿಂದ ಆಗುತ್ತಿರುವ ಸಮಸ್ಯೆ ನಿವಾರಿಸಬೇಕು ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಒತ್ತಾಯಿಸಿದ್ದಾರೆ.ನಗರದ ವಿವಿಧ ಬಡಾವಣೆ ಹಾಗೂ ಹೊರವಲಯಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಶಾಲಾ ಮಕ್ಕಳು, ವಯೋವೃದ್ದರು ಹಾಗೂ ವಾಯುವಿಹಾರಕ್ಕೆ ತೆರಳುವ ಜನರ ಮೇಲೆ ದಾಳಿ ಮಾಡುತ್ತಿವೆ. ಇದುವರೆಗೂ ಹತ್ತಾರು ಜನರು ಬೀದಿ ನಾಯಿಗಳ ಹಾವಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ನಾಯಿ ಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆಯೂ ದೊರೆಯದೆ ಪರಿತಪಿಸುತ್ತಿರುವ ಉದಾಹರಣೆ ಇದೆ ಎಂದರು.ತುಮಕೂರು ನಗರದ 35 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಇದೆ. ಅದರಲ್ಲಿಯೂ ನಗರದ ಹೊರಲವಯದ ರಸ್ತೆಯ ಇಕ್ಕೆಲಗಳಲ್ಲಿ ಕೋಳಿ, ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಜನರು ಬಿಸಾಡುವುದರಿಂದ, ಅಲ್ಲಿಗೆ ಆಹಾರ ಹುಡುಕಿಕೊಂಡು ಬರುವ ಬೀದಿ ನಾಯಿಗಳು, ಹಗಲು, ರಾತ್ರಿ ಎನ್ನದೆ ರಸ್ತೆಯಲ್ಲಿ ಓಡಾಡುವ ಜನರಲ್ಲದೆ, ದ್ವಿಚಕ್ರವಾಹನ, ಸೈಕಲ್ ಮೇಲೆ ಸಂಚರಿಸುವ ಜನರ ಮೇಲೆ ದಾಳಿ ಮಾಡುತ್ತಿದೆ. ಜಿಲ್ಲಾಡಳಿತ ಮತ್ತು ನಗರಪಾಲಿಕೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.