ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಿ

| Published : Jul 11 2024, 01:30 AM IST

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕರನ್ನು ಗುಲಾಮರನ್ನಾಗಿಸಿರುವ 4 ಕಾರ್ಮಿಕ ಸಂಹಿತೆ ಹಿಂಪಡೆಯಬೇಕು. ರೈತರ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡುವ ಶಾಸನ ರೂಪಿಸಬೇಕು. ಬಿಸಿಯೂಟ ನೌಕರರು ಸೇರಿದಂತೆ ಸ್ಕೀಂ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯ.

ಹುಬ್ಬಳ್ಳಿ:

ದೇಶವ್ಯಾಪಿ ಬೇಡಿಕೆಗಳ ದಿನದ ಅಂಗವಾಗಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಮಿನಿ ವಿಧಾನಸೌಧದ ಎದುರು ಸಮಾವೇಶಗೊಂಡ ಸಿಐಟಿಯು ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರನ್ನು ಗುಲಾಮರನ್ನಾಗಿಸಿರುವ 4 ಕಾರ್ಮಿಕ ಸಂಹಿತೆ ಹಿಂಪಡೆಯಬೇಕು. ರೈತರ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡುವ ಶಾಸನ ರೂಪಿಸಬೇಕು. ಬಿಸಿಯೂಟ ನೌಕರರು ಸೇರಿದಂತೆ ಸ್ಕೀಂ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಬೇಕು. ಆಟೋ, ಹಮಾಲಿ ಮುಂತಾದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ರೈಲ್ವೆ, ವಿದ್ಯುತ್‌ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಕ್ಕೊತ್ತಾಯ:

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿ ಜಾರಿಗೆ ತರಬೇಕು. ರೈತ ವಿರೋಧಿ ಕೃಷಿ ಕಾನೂನು ಹಿಂಪಡೆಯಬೇಕು. ದೇಶದ ಐಕ್ಯತೆ ಛಿದ್ರಗೊಳಿಸುವ, ಸೌಹಾರ್ದತೆ ಹಾಳುಮಾಡುವ ಕೃತ್ಯ ಹಾಗೂ ಶಕ್ತಿಗಳನ್ನು ನಿಗ್ರಹಿಸಬೇಕು. ಸಂವಿಧಾನದ ಧರ್ಮನಿರಪೇಕ್ಷ ಮೌಲ್ಯ ಸಂರಕ್ಷಿಸಬೇಕು. ಶಿಕ್ಷಣ ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿ ರದ್ದುಗೊಳಿಸಬೇಕು. ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಠ 36 ಗಂಟೆ ಹಾಗೂ ದಿನದ ಪಾಳಿಯನ್ನು 6ಕ್ಕೆ ಮಿತಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಹಕ್ಕೊತ್ತಾಯ ಮಾಡಲಾಯಿತು. ನಂತರ ತಹಸೀಲ್ದಾರ್‌ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ, ರೈತ ಮುಖಂಡ ಬಿ.ಎಸ್‌. ಸೊಪ್ಪಿನ, ಚನ್ನಮ್ಮ ಡೊಳ್ಳಿನ, ಸುನಂದಾ ಚಿಗರಿ, ಫಕ್ಕೀರವ್ವ ತೆಂಬದಮನಿ, ಹನಮಂತ ಅಂಬಿಗೇರ, ಚಿದಾನಂದ ಸವದತ್ತಿ, ರಫೀಕ್‌ ಮುಳಗುಂದ, ಪುಂಡಲೀಕ ಬಡಿಗೇರ, ಮುಸ್ತಾಕ ಕರ್ಜಗಿ, ಹಸನಖಾನ್‌ ಬಡೇಖಾನ್‌, ಚನ್ನಪ್ಪ ಯಲಿಗಾರ ಇದ್ದರು.