ಸಾರಾಂಶ
ಈಗ ಪರೀಕ್ಷೆಗಳ ಸಮಯವಾಗಿದ್ದು, ವಿದ್ಯಾರ್ಥಿಗಳು ಸಹಜವಾಗಿಯೇ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ನಿಯಂತ್ರಿಸಬಹುದು.
ಹುಬ್ಬಳ್ಳಿ:
ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಒತ್ತಡ ನಿಯಂತ್ರಣಕ್ಕೆ ಬಂದು ಹೆಚ್ಚು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಲು ಸಹಕಾರಿಯಾಗಲಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದರು.ನಗರದ ಬಿವಿಬಿ ಕ್ಯಾಂಪಸ್ ಮೈದಾನದಲ್ಲಿ ಗುರುವಾರ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಏಕವಲಯ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗ ಪರೀಕ್ಷೆಗಳ ಸಮಯವಾಗಿದ್ದು, ವಿದ್ಯಾರ್ಥಿಗಳು ಸಹಜವಾಗಿಯೇ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ನಿಯಂತ್ರಿಸಬಹುದು. ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಜತೆಗೆ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗಲಿದೆ ಎಂದರು.ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಲೀದ ಬಿ. ಖಾನ್ ಮಾತನಾಡಿ, ಕ್ರೀಡಾ ಚಟುವಟಿಕೆಯಿಂದ ಶಿಸ್ತು, ಸಮಯಪಾಲನೆ ಕಲಿಯುತ್ತೇವೆ. ದೇಹ ಕೂಡ ಸದೃಢವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ರಮೇಶ್ ಎಚ್. ರಟಗೇರಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಪಾಲ ಕುರಕುರಿ ಸ್ವಾಗತಿಸಿದರು. ಶಾರದಾ ಎಸ್. ಭಟ್, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಕ್ರೀಡಾಪುಟಗಳು ಪಾಲ್ಗೊಂಡಿದ್ದರು.