ಹೊಳೆನರಸೀಪುರ : ಗಡ್ಡವನ್ನು ಟ್ರಿಂ ಮಾಡಿ ಎಂದಿದ್ದಕ್ಕೆ ಕಾಲೇಜಿನಲ್ಲಿ ವಿವಾದ ಸೃಷ್ಟಿ

| Published : Nov 11 2024, 12:53 AM IST / Updated: Nov 11 2024, 08:10 AM IST

ಹೊಳೆನರಸೀಪುರ : ಗಡ್ಡವನ್ನು ಟ್ರಿಂ ಮಾಡಿ ಎಂದಿದ್ದಕ್ಕೆ ಕಾಲೇಜಿನಲ್ಲಿ ವಿವಾದ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ವಸ್ತ್ರ ಸಂಹಿತೆ ಪಾಲಿಸಿ, ಶುಚಿಯಾದ ಸಮವಸ್ತ್ರ ಧರಿಸಿ, ಗಡ್ಡವನ್ನು ಟ್ರಿಂ ಮಾಡಿ, ಕ್ಲಿನಿಕಲ್ ಲ್ಯಾಬ್‌ಗೆ ಹೋಗುವಾಗ ಶೂ ಧರಿಸಿ ಎಂದು ತಿಳಿ ಹೇಳಿದ್ದಕ್ಕೆ ಕಾಲೇಜಿನಲ್ಲಿ ವಿವಾದ ಸೃಷ್ಟಿಯಾಗಿದೆ. 

 ಹೊಳೆನರಸೀಪುರ : ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿರುವ ಸರ್ಕಾರಿ  ನರ್ಸಿಂಗ್ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ವಸ್ತ್ರ ಸಂಹಿತೆ ಪಾಲಿಸಿ, ಶುಚಿಯಾದ ಸಮವಸ್ತ್ರ ಧರಿಸಿ, ಗಡ್ಡವನ್ನು ಟ್ರಿಂ ಮಾಡಿ, ಕ್ಲಿನಿಕಲ್ ಲ್ಯಾಬ್‌ಗೆ ಹೋಗುವಾಗ ಶೂ ಧರಿಸಿ ಎಂದು ತಿಳಿ ಹೇಳಿದ್ದಕ್ಕೆ ಕಾಲೇಜಿನಲ್ಲಿ ವಿವಾದ ಸೃಷ್ಟಿಯಾಗಿದೆ.

ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ರಾಜ್ಯ ಹಾಗೂ ದೇಶದ ನಾನಾ ಜಿಲ್ಲೆಗಳಿಂದ ಆಗಮಿಸಿದ ಒಟ್ಟು ೩೩೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶೇ. 100 ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಉತ್ತಮ ಕಾಲೇಜು ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ. ಕಾಲೇಜಿನ ಎಲ್ಲಾ ಅಧ್ಯಾಪಕರು ಶಿಸ್ತಿನಿಂದ ಬೋಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳೂ ಕಾಲೇಜಿನಲ್ಲಿ ಶಿಸ್ತು ಹಾಗೂ ಕಾಲೇಜಿನ ನಿಯಮಗಳನ್ನು ಪಾಲಿಸಬೇಕೆಂದು ತಾಕೀತು ಮಾಡುತ್ತಾರೆ.

ಜಮ್ಮು ಮತ್ತು ಕಾಶ್ಮೀರದಿಂದ ಪ್ರಧಾನ ಮಂತ್ರಿ ವಿಶೇಷ ಸ್ಕಾಲರ್ ಶಿಪ್ (ಪಿ.ಎಂ.ಎಸ್.ಎಸ್) ಯೋಜನೆ ಅಡಿಯಲ್ಲಿ ಈ ವರ್ಷ ಬಂದಿರುವ ೭ ವಿದ್ಯಾರ್ಥಿಗಳೂ ಸೇರಿ ಜಮ್ಮು ಕಾಶ್ಮೀರದ ಒಟ್ಟು ೧೪ ವಿದ್ಯಾಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿಗಳೂ ಸೇರಿದಂತೆ ಕೆಲವು ವಿದ್ಯಾರ್ಥಿಗಳು ಕ್ಲಿನಿಕಲ್ ಲ್ಯಾಬಿಗೆ ಶುಚಿಯಾಗಿ, ಶೂ ಧರಿಸಿ ಬಾರದೆ, ಗಡ್ಡವನ್ನು ಟ್ರಿಂ ಮಾಡದೇ ಬರುತ್ತಿದ್ದ ಹಿನ್ನೆಲೆಯಲ್ಲಿ ಅವರುಗಳಿಗೆ ಆಗಾಗ ತಿಳಿಸಿ ಹೇಳಿದ್ದರೂ, ಅವರು ತಿದ್ದಿಕೊಂಡಿರಲಿಲ್ಲ. ಸೆಪ್ಟಂಬರ್ ೪ರಂದು ಶುಚಿಯಾಗಿ, ಶೂ ಧರಿಸಿ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಕ್ಲಿನಿಕಲ್ ಲ್ಯಾಬಿಗೆ ಬಾರದ ಗಿರೀಶ್, ಚನ್ನಬಸವನಗೌಡ, ಮನೋಜ್, ರುದ್ರೇಶ್, ಸಮೀರ್, ಉಮರ್, ಆದಿಲ್ ಸೇರಿದಂತೆ ೧೮ ವಿದ್ಯಾರ್ಥಿಗಳನ್ನು ಕ್ಲಿನಿಕಲ್ ಲ್ಯಾಬ್‌ನ ಮಾರ್ಗದರ್ಶಕ ವಿಜಯಕುಮಾರ್‌ ಲ್ಯಾಬ್‌ಗೆ ಸೇರಿಸದೇ ಹೊರಗಡೆ ನಿಲ್ಲಿಸಿದ್ದರು. ನಂತರ ಕೆಲವರು ಈ ವಿಷಯವನ್ನು ಮುಚ್ಚಿಟ್ಟು ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸಲು ಹೇಳಿದರು ಎಂದು ಎಕ್ಸ್‌ನಲ್ಲಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ ಎಂದು ಪ್ರಾಂಶುಪಾಲ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

ನಮ್ಮ ಕಾಲೇಜಿನಲ್ಲಿ ನಾವು ಯಾರಿಗೂ ಗಡ್ಡಬೋಳಿಸಲು ಹೇಳಿಲ್ಲ, ಶುಚಿಯಾಗಿ ಕಾಲೇಜಿನ ನಿಯಮದಂತೆ ಬನ್ನಿ ಎಂದು ಹೇಳಿದ್ದೇವೆ. ಆದರೆ ಕೆಲವು ಯುವಕರು ಕಾಲೇಜಿನ ನಿಯಮ ಪಾಲಿಸದೇ ಇರುವುದು ನಮಗೆ ಬೇಸರ ತರಿಸಿದೆ. ನಾವು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇವೆ ಎಂದು ಕಾಲೇಜಿನ ಪ್ರಾಧ್ಯಾಪಕರು ತಿಳಿಸಿದ್ದಾರೆ. * ಬಾಕ್ಸ್‌: ಪ್ರಾಂಶುಪಾಲ ಚಂದ್ರಶೇಖರ್ ಸ್ಪಷ್ಟನೆ:

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್‌, ಗಡ್ಡವನ್ನು ಟ್ರಿಂ ಮಾಡಿ, ಶುಚಿಯಾದ ಸಮವಸ್ತ್ರ ಧರಿಸಿ, ಲ್ಯಾಬ್‌ಗೆ ಹೋಗುವಾಗ ಶೂ ಧರಿಸಿ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಕಾಲೇಜಿನಲ್ಲಿ ಶಿಸ್ತು ಹಾಗೂ ಕಾಲೇಜಿನ ನಿಯಮಗಳನ್ನು ಸರಿಯಾಗಿ ಪಾಲಿಸದ ಗಿರೀಶ್, ಚನ್ನಬಸವನಗೌಡ, ಮನೋಜ್, ರುದ್ರೇಶ್, ಸಮೀರ್, ಉಮರ್, ಆದಿಲ್ ಸೇರಿದಂತೆ ೧೮ ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಯ ಕ್ಲಿನಿಕಲ್ ಲ್ಯಾಬಿಗೆ ಲ್ಯಾಬ್‌ನ ಮಾರ್ಗದರ್ಶಕ ವಿಜಯಕುಮಾರ್‌ ಸೇರಿಸದೇ ಹೊರಗಡೆ ನಿಲ್ಲಿಸಿದ್ದರು. ನಂತರ ಕೆಲವರು ಈ ವಿಷಯವನ್ನು ಮುಚ್ಚಿಟ್ಟು ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸಲು ಹೇಳಿದರು ಎಂದು ಎಕ್ಸ್‌ನಲ್ಲಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ.