ಹರಿಹರ ತಾಲೂಕಿನ ಪಂಚಮಸಾಲಿ ಮಠದ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಮಠದ ವಿವಾದ ಮುನ್ನೆಲೆಗೆ ಬಂದಿದೆ. ಶ್ರೀಮಠದ ಸ್ವಾಮೀಜಿ ಹಾಗೂ ಸಮಾಜ ಸಮಿತಿಯವರ ಮಧ್ಯೆ ತೀವ್ರ ಜಟಾಪಟಿ, ಆರೋಪ, ಪ್ರತ್ಯಾರೋಪಗಳು ಒಂದೊಂದಾಗಿ ಕೇಳಿಬರುತ್ತಿವೆ.
- ನಂದಿಗುಡಿ ಮಠದಲ್ಲಿಯೂ ಲೆಕ್ಕ ಕೊಡುವಂತೆ ಮುಖಂಡರು, ಭಕ್ತರ ಧ್ವನಿ । ರಕ್ಷಣೆ ಕೋರಿ ಸ್ವಾಮೀಜಿ ದೂರು ದಾಖಲು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ ತಾಲೂಕಿನ ಪಂಚಮಸಾಲಿ ಮಠದ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಮಠದ ವಿವಾದ ಮುನ್ನೆಲೆಗೆ ಬಂದಿದೆ. ಶ್ರೀಮಠದ ಸ್ವಾಮೀಜಿ ಹಾಗೂ ಸಮಾಜ ಸಮಿತಿಯವರ ಮಧ್ಯೆ ತೀವ್ರ ಜಟಾಪಟಿ, ಆರೋಪ, ಪ್ರತ್ಯಾರೋಪಗಳು ಒಂದೊಂದಾಗಿ ಕೇಳಿಬರುತ್ತಿವೆ.ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಗ್ರಾಮದ ಶ್ರೀ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ನೊಳಂಬ ಲಿಂಗಾಯ ಕೇಂದ್ರ ಸಮಿತಿ ಸದಸ್ಯರು ಆರೋಪ ಮಾಡಿದ್ದರೆ, ಸ್ವಾಮೀಜಿ ಸಹ ಕೆಲವರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ರಾಜ್ಯದ ನೊಳಂಬ ಲಿಂಗಾಯತ ಸಮಾಜದ ಶಕ್ತಿ ಕೇಂದ್ರವಾಗಿರುವ ನಂದಿಗುಡಿ ವೃಷಭಪುರಿ ಮಹಾ ಸಂಸ್ಥಾನ ಬೃಹನ್ಮಠದ ಶ್ರೀಗಳು ಮಠಕ್ಕೆ ಬಂದ ದೇಣಿಗೆ, ಕಾಣಿಕೆ, ವಿವಿಧ ಮೂಲಗಳಿಂದ ಬಂದ ಆದಾಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದಾಗಿ ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.ಶ್ರೀಮಠದ ಆಸ್ತಿ ವಿಚಾರವಾಗಿ ಸ್ವಾಮೀಜಿ ಹಾಗೂ ಸಮುದಾಯದ ಮುಖಂಡರ ಮಧ್ಯೆ ಶೀತಲಸಮರ ಈಗ ತಾರಕಕ್ಕೇರುತ್ತಿದೆ. ಮಠ ಉಳಿಸಿ, ಮಠ ಬೆಳೆಸಿ, ಲೆಕ್ಕ ಕೊಡಿ ಎಂಬುದಾಗಿ ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಸದಸ್ಯರು, ಸಮಾಜದ ಮುಖಂಡರು ಧ್ವನಿಯೆತ್ತಿದ್ದಾರೆ. ಮತ್ತೊಂದು ಕಡೆ ಸ್ವಾಮೀಜಿ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.
ಶ್ರೀಮಠಕ್ಕೆ 2006ರಲ್ಲಿ ಪೀಠಾಧಿಪತಿಯಾಗಿ ನೇಮಕವಾದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು 2006ರಿಂದ ಈವರೆಗೆ ಮಠಕ್ಕೆ ಬಂದ ದೇಣಿಗೆ, ವಿದ್ಯಾಸಂಸ್ಥೆಯ ದೇಣಿಗೆ, ವಿದ್ಯಾಸಂಸ್ಥೆ, ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದರು. ಆಗಿನಿಂದ ಈವರೆಗೆ ಶ್ರೀಮಠಕ್ಕೆ ಬಂದ ದೇಣಿಗೆ, ವಿದ್ಯಾಸಂಸ್ಥೆ, ಕೃಷಿ ಜಮೀನಿನಿಂದ ಬಂದ ಆದಾಯದ ಲೆಕ್ಕವನ್ನು ಸ್ವಾಮೀಜಿ ಕೊಡಲಿ ಎಂಬುದು ಸಮಾಜದ ಮುಖಂಡರ ಪಟ್ಟು. ನೊಳಂಬ ಸಮಾಜದ ಮುಖಂಡರು ನ.17ಕ್ಕೆ ಇದೇ ವಿಚಾರವಾಗಿ ಹರಿಹರ ತಾ. ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಸಭೆ ಸೇರಲು ತೀರ್ಮಾನಿಸಿದ್ದಾರೆ.ಕೆಲವು ಭಕ್ತರ ಪ್ರಶ್ನೆಗೆ ಸ್ವಾಮೀಜಿ ಸರಿಯಾದ ಉತ್ತರ ನೀಡದ ಹಿನ್ನೆಲೆ ಸಮಾಜದ ಸಭೆ ನಡೆಸಿ, ಶ್ರೀಮಠಕ್ಕೆ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬದಲಾವಣೆ ಮಾಡಲು ಮುಖಂಡರು ಪ್ರಯತ್ನ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸ್ವಾಮೀಜಿ ಸಹ ಮಲೇಬೆನ್ನೂರು ಪೊಲೀಸ್ ಠಾಣೆಗೆ ಪತ್ರ ಬರೆದು, ತಮಗೆ ಹಾಗೂ ಶ್ರೀಮಠಕ್ಕೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
- - -(ಬಾಕ್ಸ್-1)
* ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ದೂರು ದಾಖಲುಶ್ರೀಮಠದಿಂದ ತಮ್ಮನ್ನು ಹೊರಹಾಕಲು ವ್ಯವಸ್ಥಿತ ಸಂಚನ್ನು ನಡೆಸಲಾಗಿದೆ. ಶ್ರೀಮಠಕ್ಕೆ ಹಾಗೂ ತಮಗೆ ಸೂಕ್ತ ರಕ್ಷಣೆ ನೀಡುವಂತೆ ಮಲೇಬೆನ್ನೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸ್ವಾಮೀಜಿ ಮನವಿ ಮಾಡಿದ್ದಾರೆ. 16 ವರ್ಷದಿಂದ ಪೀಠಾಧಿಪತಿಯಾಗಿ ಮಠದ ಆಡಳಿತ ನಿರ್ವಹಿಸಿಕೊಂಡು ಬರುತ್ತಿದ್ದೇವೆ. ತಾವು ಶ್ರೀಪೀಠ ಅಲಂಕರಿಸಿದಾಗಿನಿಂದ ಈವೆಗೆ ಸಮಾಜದ ಭಕ್ತರಿಗೆ ಧರ್ಮ ಸಂಸ್ಕಾರ, ಆಧ್ಯಾತ್ಮಿಕ ಬೋಧನೆ ನೀಡುತ್ತಾ, ಶ್ರೀಮಠ, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇವೆ. ಈಚೆಗೆ ಮಠದ ವಿಚಾರವಾಗಿ ಸಮಾಜದಲ್ಲಿ 2 ಗುಂಪುಗಳಾಗಿವೆ. ಸಮಾಜದ ಕೆಲವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಶ್ರೀ ಮಠಕ್ಕೆ ಸಂಬಂಧಿಸಿದಂತೆ ಸಂಘಗಳ ಕಾಯ್ದೆಯಡಿ ಶ್ರೀ ನಂದಿಗುಡಿ ಕೃಪಾ ಪೋಷಿತ ವೀರಶೈವ ವಿದ್ಯಾವರ್ಧಕ ಸಂಘ ದಾವಣಗೆರೆ 1949ರಲ್ಲಿ ನೋಂದಾವಣಿಯಾಗಿ, ಅಸ್ತಿತ್ವದಲ್ಲಿದೆ. ಸಂಘಕ್ಕೆ ತಾವು ಅಧ್ಯಕ್ಷರಾಗಿದ್ದೇವೆ. ಸಂಘಕ್ಕೆ ಸೇರಿದ ಆಸ್ತಿ ದಾವಣಗೆರೆ ಹೃದಯಭಾಗದಲ್ಲಿದ್ದು, ನಂದಿಗುಡಿ ಹಾಸ್ಟೆಲ್ ಕೆಡವಿ, ಹೊಸ ಕಟ್ಟಡ ಕೆಟ್ಟಲು ಕೆಲವರು ಕೋರಿದ್ದರು. ಆದರೆ, ಸಮಾಜ ಮತ್ತು ಭಕ್ತರ ಸಭೆ ಕರೆದು ತೀರ್ಮಾನಿಸಬೇಕಾಗುತ್ತದೆ ಎಂದು ತಾವು ತಿಳಿಸಿದ್ದರಿಂದ ಸಂಘದ ಕೆಲ ಪದಾಧಿಕಾರಿಗಳು ತಮ್ಮ ವಿರುದ್ಧ, ಶ್ರೀಮಠದ ಬಗ್ಗೆ ಭಕ್ತರಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.- - -
(ಬಾಕ್ಸ್-2)* ಸಮಾಜದ ಮುಖಂಡರು ಹೇಳೋದೇನು?
ನಂದಿಗುಡಿ ಬೃಹನ್ಮಠಕ್ಕೆ ನ.13ರ ಸಂಜೆ ನಾವು ಭೇಟಿ ಮಾಡಿ, 2006ರಿಂದ 2026ರವರೆಗಿನ ಮಠದ ಆಯವ್ಯಯ ವಿವರ ಕೇಳಿದೆವು. ಲೋಕಾಯುಕ್ತ, ಕಂದಾಯ ಇಲಾಖೆ ಜಂಟಿಯಾಗಿ ಮಠದ ಆಸ್ತಿ ಬಗ್ಗೆ ಮಾಡಿದ ವರದಿಯಂತೆ ಕಲ್ಯಾಣ ಮಂಟಪ ಇತರೆ ಸ್ವತ್ತುಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ ಎಂಬುದನ್ನು ಮನಗಂಡಿದ್ದೇವೆ. ಈಗಾಗಲೇ ಗೋಶಾಲೆಯನ್ನು ಸರ್ಕಾರ ವಶಪಡಿಸಿಕೊಂಡಿದೆ ಎಂದು ಸಮಾಜದ ನಾಗನಗೌಡ ಇತರರು ತಿಳಿಸಿದ್ದಾರೆ.ಶ್ರೀಮಠದ ಹೈಸ್ಕೂಲ್ ಮೈದಾನವೂ ಸರ್ಕಾರದ ಸುಪರ್ದಿಗೆ ಸೇರಿದೆ. ಈಗಾಗಲೇ ಅಲ್ಲಿ ಬೋರ್ಡ್ ಹಾಕಿದ್ದಾರೆ. ಇದಕ್ಕೆಲ್ಲಾ ಏನು ಕಾನೂನು ಕ್ರಮ ಕೈಗೊಂಡಿದ್ದೀರೆಂದು ಪ್ರಶ್ನಿಸಿದೆವು. ಶ್ರೀಗಳಿಂದ ಸರಿಯಾದ ಉತ್ತರ ಬರಲಿಲ್ಲ. ಅ.31ರೊಳಗೆ ಮಾಹಿತಿ ಕೇಳಿದ್ದೆವು. ಆಗ ರುದ್ರಗೌಡ ಮಾದೇನಹಳ್ಳಿ, ನಿರ್ದೇಶಕರು, ನೊಳಂಬ ಲಿಂಗಾಯತ ಕೇಂದ್ರ ಸಮಿತಿ, ಬೆಂಗಳೂರು ಇವರಿಗೆ ದಿನಾಂಕ ನಿಗದಪಡಿಸಿ, ಫೋನ್ ಮಾಡುವುದಾಗಿ ಹೇಳಿದ್ದರು. 25 ದಿನಗಳ ನಂತರ ನಂದಿಗುಡಿ ಕೆಂಚೇಶ್ವರ ಸ್ವಾಮಿಗಳ ಗದ್ದಿಗೆಯಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಸಹ ಕರಪತ್ರ ಕೊಟ್ಟು, ಲೆಕ್ಕ ನೀಡುತ್ತೇನೆ ಎಂದಿದ್ದರು ಎಂದು ಹೇಳಿದ್ದಾರೆ.
ಆದರೆ, ಮಾತಿನಂತೆ ಯಾವುದನ್ನೂ ಶ್ರೀಗಳು ನಡೆದುಕೊಳ್ಳಲಿಲ್ಲ. ಎಲ್ಲ ಅವ್ಯವಹಾರವಾದ ಬಗ್ಗೆ ನಮಗೆ ಅನುಮಾನವಿದೆ. ಅನಂತರ ರುದ್ರಗೌಡ ನೇತೃತ್ವದಲ್ಲಿ ಹತ್ತೂರಿನಲ್ಲಿ ಸಭೆ ನಡೆಸಿ, ಮುಂದಿನ ಹೋರಾಟಕ್ಕೆ ಸಮಿತಿ ಮಾಡಿ, ಮಠ ಉಳಿಸಿ, ಬೆಳೆಸಿ ಅಭಿಯಾನಕ್ಕೆ ತೀರ್ಮಾನಿಸಲಾಗಿತ್ತು. ಯಾವುದೇ ಭಕ್ತರು ಕುಡಿದು ಬಂದು ಗಲಾಟೆ ಮಾಡಿದ ಬಗ್ಗೆ ನಮಗೆ ಕಂಡುಬಂದಿಲ್ಲ. ಭಕ್ತರ ಮೇಲೆ ಈ ತರಹದ ಅಪರಾಧ ಹೊರೆಸುವುದು ಸರಿಯಲ್ಲ. ತಕ್ಷಣವೇ ಸ್ವಾಮೀಜಿ ಸಭೆ ಕರೆದು, ಬಹಿರಂಗವಾಗಿ ಲೆಕ್ಕ ಕೊಡಲಿ. ಇಲ್ಲವಾದರೆ ಸಮಾಜದ ಸಭೆ ನಡೆಸಿ, ಹೋರಾಟವನ್ನು ರೂಪಿಸುತ್ತೇವೆ. ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. 2 ದಶಕದಿಂದ ಯಾವುದೇ ಅಭಿವೃದ್ಧಿ ಕಾಣದಂತಾಗಿದೆ ಎಂದು ಮುಖಂಡರು ದೂರಿದ್ದಾರೆ.- - -
-15ಕೆಡಿವಿಜಿ1: ನಂದಿಗುಡಿ ಗ್ರಾಮ ಬಳಿಯ ವೃಷಭಪುರಿ ಬೃಹನ್ಮಠದ ಪ್ರವೇಶ ದ್ವಾರ.-15ಕೆಡಿವಿಜಿ2: ಸ್ವಾಮೀಜಿಯವರ ಗುರು ನಿವಾಸದ ಕಟ್ಟಡ.