ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮೇಲ್ಜಾತಿಗಳ ದಬ್ಬಾಳಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶೋಷಿತರ ಜಾಗೃತಿ ಸಮಾವೇಶ ಸಂಘಟಿಸಲಾಗಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ಹೇಳಿದರು.ಜ.28 ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಶೋಷಿತರ ಜಾಗೃತಿ ಸಮಾವೇಶದ ಹಿನ್ನೆಲೆ ಬುಧವಾರ ನಡೆದ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇಲ್ಜಾತಿಯವರು ಶೋಷಿತರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿರುವು ದರಿಂದ ಸಮಾವೇಶದ ಮೂಲಕ ದಲಿತರು, ಹಿಂದುಳಿದವರು, ಆದಿವಾಸಿ, ಅಲೆಮಾರಿಗಳು, ಅಲ್ಪಸಂಖ್ಯಾತರು ಶಕ್ತಿ ಪ್ರದರ್ಶಿಸಬೇಕಿದೆ ಎಂದರು.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಅಧಿವೇಶನದಲ್ಲಿ ಕಾಂತರಾಜ್ ವರದಿ ವಿರೋಧಿಸುವ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರ ಇನ್ನೂ ವರದಿಯನ್ನೇ ಬಿಡುಗಡೆಗೊಳಿಸಿಲ್ಲ. ವೈಜ್ಞಾನಿಕ-ಅವೈಜ್ಞಾನಿಕ ಎಂದು ಹೇಗೆ ಹೇಳಲು ಸಾಧ್ಯ. ವರದಿ ಬಿಡುಗಡೆಯಾದಲ್ಲಿ ಶೋಷಿತರ ಸಂಖ್ಯೆ ಪ್ರಮಾಣ ನೋಡಿ ಆತಂಕಗಳು ಮೂಡುವುದರಿಂದ ವಿರೋಧಿಸುತ್ತಿದ್ದಾರೆ. ಶೋಷಿತರು ಒಗ್ಗಟ್ಟಾಗಿ ನಿಲ್ಲುವುದರ ಮೂಲಕ ನಮ್ಮಗಳ ಅಸ್ತಿತ್ವ ಕಾಯ್ದು ಕೊಳ್ಳೋಣವೆಂದರು.ಈ ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1931ರಲ್ಲಿ ಜಾತಿವಾರು ಸಮೀಕ್ಷೆಯಾಗಿತ್ತು. 92 ವರ್ಷಗಳ ನಂತರ ಈಗ ಮತ್ತೆ ಜನಗಣತಿಯಾಗಿದೆ. ನಾಗನಗೌಡ ಆಯೋಗದ ವರದಿಯಲ್ಲಿ ಲಿಂಗಾಯತರು, ವಕ್ಕಲಿಗರು, ಹಿಂದುಳಿದವರಲ್ಲ ಎಂದು ತೋರಿಸಿಲ್ಲದ ಕಾರಣ ಇದನ್ನು ವಿರೋಧಿಸಿದರು. ಹಾವನೂರ್ ವರದಿಗೂ ಇದೇ ಗತಿಯಾಗಿತ್ತು. ಆದರೆ ಅಂದಿನ ಸಿಎಂ ಡಿ.ದೇವರಾಜ್ ಅರಸ್ ದಿಟ್ಟತನದಿಂದ ವರದಿ ಜಾರಿಗೊಳಿಸಿದರು. ಶೋಷಿತ ಸಮುದಾಯಗಳು ಮೈಮರೆತು ಕೂತರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿ.ಪಿ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗದ ವರದಿ ಜಾರಿಗೆ ತಂದ ಪರಿಣಾಮ ಹಿಂದುಳಿದವರಿಗೆ ಮೀಸಲಾತಿ ಸಿಕ್ಕಿತು. ಆಗ ಆರ್‌ಎಸ್ಎಸ್ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿದರು. ರಾಜ್ಯ ಸರ್ಕಾರ ಶೋಷಿತರ ಉದ್ದಾರ ಮಾಡಬೇಕೆಂದು ಒತ್ತಾಯಿಸುವುದಕ್ಕಾಗಿ ಮುಂದಿನ ತಿಂಗಳು ಸಮಾವೇಶ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸೇರಿ ಎಲ್ಲಾ ಮುಖಂಡರನ್ನು ಆಹ್ವಾನಿಸಲಾಗುವುದು. ಲಕ್ಷಾಂತರ ಸಂಖ್ಯೆಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿಗಳು ಸಮಾವೇಶದಲ್ಲಿ ಭಾಗವಹಿಸಬೇಕೆಂದು ರಾಮಚಂದ್ರಪ್ಪ ವಿನಂತಿಸಿದರು.ಸಭೆಯ ಆರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್, ಸಮಾವೇಶ ರಾಜಕೀಯ ಅಸ್ಥಿತ್ವದ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಂಬಿತಗೊಳ್ಳಬಾರದು. ಸಾಂಸ್ಕೃತಿಕ ಚಳುವಳಿಯಾಗಿ ರೂಪುಗೊಂಡಾಗ ಮಾತ್ರ ಹಿಂದುಳಿದ ವರ್ಗ ಶೋಷಿತರ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ಬ್ರಾಹ್ಮಣರು, ಮನುವಾದ ಸಿದ್ಧಾಂತವುಳ್ಳವರು ನಮ್ಮನ್ನು ಆಳುತ್ತಿರುತ್ತಾರೆ ಎಂದರು.
ದಲಿತರು, ಹಿಂದುಳಿದವರು ಹಾಗೂ ಮುಸ್ಲೀಮರ ನಡುವೆ ಐಕ್ಯತೆ ವಾತಾವರಣ ಸೃಷ್ಟಿಯಾಗಬೇಕು. ಅಪಾಯದ ಅಂಚಿನಲ್ಲಿರುವ ಸಂವಿಧಾನ ಉಳಿಸಿಕೊಳ್ಳಬೇಕಾಗಿರುವುದರಿಂದ ದಲಿತರು, ಆದಿವಾಸಿ, ಅಲೆಮಾರಿಗಳು ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಶೋಷಿತರ ಜಾಗೃತಿ ಸಮಾವೇಶ ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇವಲ ರಾಜಕೀಯ ಕಾರಣಕ್ಕಾಗಿ ಸಂಘಟನೆಗೊಂಡರೆ ಬಹುಕಾಲ ಐಕ್ಯತೆ ಉಳಿಯುವುದಿಲ್ಲವೆಂದು ಮಹೇಶ ಹೇಳಿದರು.ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಜಾತಿ ಧರ್ಮಗಳ ವಿರುದ್ಧ ಎತ್ತಿಕಟ್ಟುವ ಕೆಲಸವಾಗುತ್ತಿದೆ. ಎಲ್ಲಾ ಸಮಸ್ಯೆ ಎದುರಿಸಿ ಒಂದಾಗಿ ಬಾಳುವ ಹಕ್ಕು ಸಂವಿಧಾನ ನೀಡಿದೆ. ಕಾಂತರಾಜ್ ವರದಿ ಸರ್ಕಾರ ಬಿಡುಗಡೆಗೊಳಿಸಬೇಕಿದೆ ಎಂದು ಒತ್ತಾಯಿಸಿದರು. ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ ಹಿಂದುಳಿದ, ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನವಾಗಬೇಕು. ಶೋಷಿತರು ಮುಂದೆ ಒಂದಾಗಿದ್ದರೆ ರಾಜಕೀಯ ಶಕ್ತಿ ಪಡೆದುಕೊಳ್ಳಬಹುದು. ಅನೇಕ ಆಯೋಗಗಳು ಬಂದಿದೆ. ಕಾಂತರಾಜ್ ವರದಿ ಜಾರಿಯಾಗಲೇಬೇಕು. ಮೇಲ್ಜಾತಿಯವರು ವರದಿ ಬಗ್ಗೆ ಭಯ ಪಡುವುದು ಏಕೆ? ಸಿಎಂ ಅವರು ದಿಟ್ಟ ಹೆಜ್ಜೆ ಇಡಬೇಕಿದೆ ಎಂದರು.
ಭೋವಿ ಸಮಾಜದ ಮುಖಂಡ ದಾವಣಗೆರೆ ಡಿ.ಬಸವರಾಜ್ ಮಾತನಾಡಿ, ಸಮಾವೇಶ ಅನಿವಾರ್ಯತೆಯಿದ್ದು, ಸಿಎಂಗೆ ವಿರೋಧ ಪಕ್ಷದವರು ಕಿರುಕುಳ ನೀಡುತ್ತಿರುವುದರಿಂದ ಶೋಷಿತರು ಅವರ ರಕ್ಷಣೆಗೆ ನಿಲ್ಲಬೇಕಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಕಾಂಗ್ರೆಸ್ ಮುಖಂಡ ಜೆಜೆ.ಹಟ್ಟಿ ತಿಪ್ಪೇಸ್ವಾಮಿ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿದರು.
ಶೋಷಿತ ಸಮುದಾಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮ್, ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ರಾಮಕೃಷ್ಣ, ವೆಂಕಟಪತಿ ಸುಬ್ಬರಾಜು, ಮೇಯರ್ ರಾಮಚಂದ್ರಪ್ಪ, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಮಾನವಿ ವೀರಣ್ಣ, ಕಾರ್ಯದರ್ಶಿ ಬಸವರಾಜ್ ಬಸಲಿಗುಂದಿ, ಜಿಪಂ ಮಾಜಿ ಸದಸ್ಯ ಬಿ.ಯೋಗೇಶ್‍ಬಾಬು, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಎಚ್.ಸಿ.ನಿರಂಜನಮೂರ್ತಿ, ಅಖಿಲ ಭಾರತ ವಿಶ್ವಕರ್ಮ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಸವಿತಾ ಸಮಾಜದ ಎನ್.ಡಿ.ಕುಮಾರ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಅಲೆಮಾರಿ ಸಮುದಾಯದ ಎಸ್.ಲಕ್ಷ್ಮಿಕಾಂತ್, ಕೊರಚ ಸಮಾಜದ ಕೃಷ್ಣಪ್ಪ, ಎಂ.ಪಿ.ಶಂಕರ್, ರೂಪ ಕೃಷ್ಣಪ್ಪ, ಪ್ರಕಾಶ್‍ನಾಯ್ಕ, ದೇವರಾಜ್, ರಾಜ್‍ಕುಮಾರ್ ಸೊಲೋಮನ್, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಮಾಜಿ ಸದಸ್ಯರುಗಳಾದ ಆರ್.ಕೃಷ್ಣಮೂರ್ತಿ, ಆರ್.ನರಸಿಂಹರಾಜ, ಕಸಾಪ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಛಲವಾದಿ ಸಮಾಜದ ಎಸ್.ಎನ್.ರವಿಕುಮಾರ್ , ನಿಶಾನಿ ಜಯ್ಯಣ್ಣ, ಅಬ್ದುಲ್ ರೆಹಮಾನ್ ಇದ್ದರು.