7ರಿಂದ ದ.ಕ. ಗ್ಯಾರಂಟಿ ಫಲಾನುಭವಿಗಳ ಸಮಾವೇಶ: ಗುಂಡೂರಾವ್‌

| Published : Mar 03 2024, 01:32 AM IST

7ರಿಂದ ದ.ಕ. ಗ್ಯಾರಂಟಿ ಫಲಾನುಭವಿಗಳ ಸಮಾವೇಶ: ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಚ್ 7ರಂದು ಪುತ್ತೂರು, ಮೂಲ್ಕಿ, ಮಂಗಳೂರು ತಾಲೂಕುಗಳಲ್ಲಿ, ಮಾರ್ಚ್ 9ರಂದು ಬೆಳ್ತಂಗಡಿ, ಬಂಟ್ವಾಳ, ಮತ್ತು ಉಳ್ಳಾಲ ತಾಲೂಕಿನಲ್ಲಿ, ಮಾ.10 ರಂದು ಸುಳ್ಯ, ಕಡಬ, ಮೂಡುಬಿದಿರೆ ತಾಲೂಕುಗಳಲ್ಲಿ ಸಮಾವೇಶ ನಡೆಯಲಿದೆ ಎಂದು ಸಚಿವ ಗುಂಡೂರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಮಾರ್ಚ್ 7ರಿಂದ ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ವಿವಿಧ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಅಭೂತಪೂರ್ವ ಯೋಜನೆಗಳಾಗಿ ದಾಖಲಾಗಿವೆ. ಯಾರೂ ನಿರೀಕ್ಷಿಸಿರದ ವೇಗದಲ್ಲಿ ಜಾರಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಜನತೆಗೆ ಲಾಭ ಸಿಕ್ಕಿದೆ. ಜನತೆಯ ಈ ನೆಮ್ಮದಿ ಮತ್ತು ತೃಪ್ತಿಯನ್ನು ಅಭಿವ್ಯಕ್ತಗೊಳಿಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎಲ್ಲೆಲ್ಲಿ ಸಮಾವೇಶ: ಮಾರ್ಚ್ 7ರಂದು ಪುತ್ತೂರು, ಮೂಲ್ಕಿ, ಮಂಗಳೂರು ತಾಲೂಕುಗಳಲ್ಲಿ, ಮಾರ್ಚ್ 9ರಂದು ಬೆಳ್ತಂಗಡಿ, ಬಂಟ್ವಾಳ, ಮತ್ತು ಉಳ್ಳಾಲ ತಾಲೂಕಿನಲ್ಲಿ, ಮಾ.10 ರಂದು ಸುಳ್ಯ, ಕಡಬ, ಮೂಡುಬಿದಿರೆ ತಾಲೂಕುಗಳಲ್ಲಿ ಸಮಾವೇಶ ನಡೆಯಲಿದೆ ಎಂದು ಸಚಿವ ಗುಂಡೂರಾವ್‌ ಹೇಳಿದರು.

ನೋಂದಣಿಗೆ ಕೌಂಟರ್‌: ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೊಸದಾಗಿ ನೋಂದಣಿ ಮಾಡಲು ಸಮಾವೇಶದಲ್ಲಿ ಕೌಂಟರ್‌ ತೆರೆಯಲಾಗುವುದು, ಅಲ್ಲದೆ ಈಗಾಗಲೇ ಯೋಜನೆಯ ಲಾಭ ಪಡೆಯುತ್ತಿರುವ ಫಲಾನುಭವಿಗಳ ಕುಂದು ಕೊರತೆ ಪರಿಹರಿಸಲು ಪ್ರತ್ಯೇಕ ಕೇಂದ್ರವನ್ನು ಸಮಾವೇಶ ಸ್ಥಳದಲ್ಲಿ ತೆರೆಯಲಾಗುವುದು ಎಂದು ಅವರು ಹೇಳಿದರು.ಫಲಾನುಭವಿಗಳನ್ನು ಕರೆದುಕೊಂಡು ಬರಲು ಬಸ್ ವ್ಯವಸ್ಥೆ ಹಾಗೂ ಅಗತ್ಯ ಸೌಲಭ್ಯಗಳನ್ನು ಏರ್ಪಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ. ಆನಂದ್ ಮತ್ತಿತರರು ಇದ್ದರು.