‘ಕೈ’ಕಮಾಂಡ್‌ ಬೆದರಿಕೆಗೆ ಸಮಾವೇಶ: ಬಿವೈವಿ

| Published : Jul 19 2025, 01:00 AM IST

ಸಾರಾಂಶ

ಇದು ಸಾಧನಾ ಸಮಾವೇಶ ಅಲ್ಲ. ಕಾಂಗ್ರೆಸ್ ಹೈಕಮಾಂಡ್‌ಗೆ ಮಾಡುತ್ತಿರುವ ಬ್ಲ್ಯಾಕ್ ಮೇಲ್ ಸಮಾವೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಇದು ಸಾಧನಾ ಸಮಾವೇಶ ಅಲ್ಲ. ಕಾಂಗ್ರೆಸ್ ಹೈಕಮಾಂಡ್‌ಗೆ ಮಾಡುತ್ತಿರುವ ಬ್ಲ್ಯಾಕ್ ಮೇಲ್ ಸಮಾವೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

4ನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕುಟುಂಬ ಸಮೇತ ಚಾಮುಂಡೇಶ್ವರಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಂದರೆ ಸಮಾವೇಶ, ಸಮಾವೇಶ ಅಂದರೆ ಸಿದ್ದರಾಮಯ್ಯ. ಸಿಎಂ ಸ್ಥಾನ ಅಲ್ಲಾಡುವ ವೇಳೆಯಲ್ಲಿ ಈ ರೀತಿಯ ಸಮಾವೇಶ ಮಾಡಿ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಸುವ ತಂತ್ರ ಸಿದ್ದರಾಮಯ್ಯಗೆ ಸಿದ್ಧಿಸಿದೆ ಎಂದು ಆರೋಪಿಸಿದರು.

ಸಿಎಂಗೆ ದೆಹಲಿಯಲ್ಲಿ ರಾಹುಲ್‌ ಗಾಂಧಿ ಭೇಟಿಗೆ ಸಮಯವೇ ಸಿಕ್ಕಿಲ್ಲ. ರಾಹುಲ್ ಗಾಂಧಿ ಸಮಯ ಕೂಡ ಕೊಟ್ಟಿಲ್ಲ. ಹೀಗಾಗಿ, ಕಾಂಗ್ರೆಸ್‌ಗೆ ಸವಾಲು ಹಾಕಲು ಸಾಧನಾ ಸಮಾವೇಶ ಮಾಡ್ತಿದ್ದಾರೆ. ಇದು ಸಾಧನಾ ಸಮಾವೇಶ ಅಲ್ಲ. ಕಾಂಗ್ರೆಸ್ ಹೈಕಮಾಂಡ್‌ಗೆ ಮಾಡುತ್ತಿರುವ ಬ್ಲ್ಯಾಕ್ ಮೇಲ್ ಸಮಾವೇಶ ಎಂದರು.

ರಾಜ್ಯಕ್ಕಾಗಿ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಸಮಾವೇಶ ಮಾಡುತ್ತಿದ್ದಾರೆ? ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಮಯ ಬಂದಿದೆ. ಹೀಗಾಗಿ ಹೈಕಮಾಂಡ್ ಬೆದರಿಸಲು ಸಿಎಂ ಸಮಾವೇಶ ಮಾಡುತ್ತಿದ್ದಾರೆ. ಮೂಡಾ ಹಗರಣದ ವೇಳೆಯೂ ಮೈಸೂರಿನಲ್ಲಿ ಸಮಾವೇಶ ಮಾಡಿದರು. ತಮ್ಮ ಕುರ್ಚಿಗೆ ಸಂಕಷ್ಟ ಬಂದಾಗ ಅಹಿಂದ ಸಮುದಾಯ ನೆನಪಾಗುತ್ತದೆ. ಅಹಿಂದ ಸಮುದಾಯ ಇವರ ಮತ ಬ್ಯಾಂಕ್ ಮಾತ್ರ ಎಂದು ಟೀಕಿಸಿದರು.

ಆರ್‌ಸಿಬಿ ತಂಡ ಬಲಿಪಶು:

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಕುನ್ಹಾ ವರದಿ ಅರೆಬೆಂದಿದೆ. ಸಿಎಂ- ಡಿಸಿಎಂ ಪೈಪೋಟಿಗೆ 11 ಜನ ಬಲಿಯಾದರು.‌ ಈ ತಪ್ಪು ಮುಚ್ಚಿಕೊಳ್ಳಲು ಆರ್‌ಸಿಬಿ ತಂಡವನ್ನು ಬಲಿಪಶು ಮಾಡಿದ್ದಾರೆ. ಈ ವರದಿ ಸಮರ್ಪಕ ಮತ್ತು ನ್ಯಾಯಯುತವಾಗಿಲ್ಲ. ಸಿಎಂಗೆ ಪ್ರಾಮಾಣಿಕತೆ ಇದ್ದಿದ್ದರೇ ಇಂತಹ ವರದಿಯನ್ನು ನ್ಯಾಯಾಲಯದ ಮುಂದೆ ಇಡುತ್ತಿರಲಿಲ್ಲ ಎಂದರು.