ಲವ್ ಜಿಹಾದ್‌ನಂತೇ ಮತಾಂತರ ಜಿಹಾದ್: ಆರ್‌. ಅಶೋಕ್‌

| Published : Aug 26 2025, 01:05 AM IST

ಸಾರಾಂಶ

ಧರ್ಮಸ್ಥಳ ವಿಚಾರವಾಗಿ ಬುರುಡೆ ಬಿಡಲಾಗಿದೆ. ಇದು ಬುರುಡೆ ಸರ್ಕಾರ ಆಗಿದ್ದು, ಲವ್ ಜಿಹಾದ್ ಮಾದರಿಮತಾಂತರ ಜಿಹಾದ್ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಧರ್ಮಸ್ಥಳ ವಿಚಾರವಾಗಿ ಬುರುಡೆ ಬಿಡಲಾಗಿದೆ. ಇದು ಬುರುಡೆ ಸರ್ಕಾರ ಆಗಿದ್ದು, ಲವ್ ಜಿಹಾದ್ ಮಾದರಿ

ಮತಾಂತರ ಜಿಹಾದ್ ಮಾಡಲಾಗುತ್ತಿದೆ. ಹಾಗಾಗಿ ಧರ್ಮಸ್ಥಳದ ಕುರಿತು ಷಡ್ಯಂತ್ರ ನಡೆಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದರು.

ಇಲ್ಲಿನ ಟಿಬಿಡ್ಯಾಂ ಪ್ರದೇಶದಲ್ಲಿ 19ನೇ ಕ್ರಸ್ಟ್‌ ಗೇಟ್‌ ನಿರ್ಮಾಣ ಆಗುತ್ತಿರುವುದನ್ನು ಸೋಮವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳವನ್ನು ಮುಜರಾಯಿ ಇಲಾಖೆ ಸೇರಿಸಲು ಹೊರಟಿದ್ದಾರೆ. ಈ ಸರ್ಕಾರಕ್ಕೆ ಆದಾಯ ಇಲ್ಲ, ಧರ್ಮಸ್ಥಳಕ್ಕೆ ತಿರುಪತಿಯಂತೇ ಆದಾಯ ಬರುತ್ತದೆ. ಹಾಗಾಗಿ ಈ ದೇಗುಲ ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಲು ಈ ಕೆಲಸ ಮಾಡಲಾಗುತ್ತಿದೆ. ಧರ್ಮಸ್ಥಳದ ವಿಚಾರದಲ್ಲಿ ದೊಡ್ಡ ಹುನ್ನಾರ ಅಡಗಿದೆ. ಇವರಿಗೆ ಹಿಂದೂ ದೇವಾಲಯಗಳು ಟಾರ್ಗೆಟ್ ಆಗಿವೆ. ಚರ್ಚ್ ಹಾಗೂ ಮಸೀದಿ ಕಡೆ ಕಾಂಗ್ರೆಸ್‌ನವರು ಹೋಗುವುದಿಲ್ಲ, ಇದರಿಂದ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ. ಮಾಸ್ಕ್‌ಮ್ಯಾನ್, ಸುಜಾತಾ ಭಟ್ ಇವರೆಲ್ಲ ಪಾತ್ರಧಾರಿಗಳು, ಮಾಸ್ಕ್ ಹಾಕಿರುವವನ ಹಿಂದೆ ಸರ್ಕಾರ ಇದೆ. ಅವನಿಗೆ ಮುಸುಕು ಹಾಕಿಸಿದ್ದು ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಗತಿಪರರು ಇದರ ಹಿಂದೆ ಇದ್ದಾರೆ. ಬುರುಡೆ ಕಥೆ ಹೊರಗಡೆ ಬಂದ ಕೂಡಲೇ ಪ್ರಗತಿಪರರು ಕಾಣೆಯಾಗಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ, ಎರಡ್ಮೂರು ಕೋಟಿ ರು. ಜನರ ತೆರಿಗೆ ದುಡ್ಡು ಖರ್ಚು ಮಾಡಿದೆ. ನಮ್ಮ ಸರ್ಕಾರ ಇದ್ದಾಗಲೂ ಇಂತಹ ದೂರು ಬಂದಿದ್ದವು, ನಾವು ಎಸ್‌ಐಟಿ ರಚನೆ ಗೋಡವೇಗೆ ಹೋಗಲಿಲ್ಲ. ಇವರಿಗೆ ಏಕೆ ಬೇಕಿತ್ತು ಎಸ್‌ಐಟಿ ರಚನೆ ದರ್ದು. ಈ ಚಿನ್ನಯ್ಯ ಎಂಥವನು ಎಂಬುದು ಮಂಡ್ಯದ ನಾಗಮಂಗಲದ ಜನತೆಗೆ ಗೊತ್ತು. ಹೀಗಿದ್ದರೂ ಸರ್ಕಾರ ಮುಸುಕು ಹಾಕಿಸಿದೆ. ಯಾವನೋ ಒಬ್ಬ ದಾರಿಯಲ್ಲಿ ಹೋಗುವವನ ಮಾತು ಕೇಳಿ ಎಸ್ಐಟಿ ರಚನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಮಾತನಾಡಿ, ಆರ್‌ಎಸ್ಎಸ್ ಇರಲಿಲ್ಲ, ಅಂದ್ರೆ ಭಾರತ- ಪಾಕಿಸ್ತಾನ ಆಗುತ್ತಿತ್ತು, ಈಗಾಗಲೇ ಎರಡು ಪಾಕಿಸ್ತಾನ ಆಗಿವೆ. ಆರ್‌ಎಸ್ಎಸ್‌ಗೆ ದೇಶ ಭಕ್ತಿ ಇದೆ. ಹಾಗಾಗಿ ಭಾರತವು ಉಳಿದುಕೊಂಡಿದೆ. ಇಲ್ಲವಾದಲ್ಲಿ ಮತ್ತೊಂದು ಪಾಕಿಸ್ತಾನ ಆಗುತ್ತಿತ್ತು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೇಶಭಕ್ತಿ ಇದೆ. ಹಾಗಾಗಿ ಆರೆಸ್ಸೆಸ್‌ ಗೀತೆ ಹಾಡಿದ್ದಾರೆ. ಅವರು ಪ್ರಯಾಗರಾಜ್‌ಗೂ ಭೇಟಿ ನೀಡಿದರು. ಆರ್‌ಎಸ್ಎಸ್ ಇರೋದಕ್ಕೆ ಈ ದೇಶ ಉಳಿದಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಡೋ ಹುಡುಗಲ್ಲ, ಚಾಣಕ್ಯ, ಬುದ್ದಿವಂತ, ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಯಾವ ಹೇಳಿಕೆ ನೀಡಿದರೆ, ಯಾರಿಗೆ ನಾಟುತ್ತೇ ಎಂಬುದು ಗೊತ್ತು. ಎಚ್ಚರಿಕೆ ಕೊಡೋರಿಗೆ ಕೊಡುತ್ತಿದ್ದಾರೆ, ಸಮಾಧಾನ ಮಾಡೋರಿಗೆ ಸಮಾಧಾನ ಮಾಡುತ್ತಿದ್ದಾರೆ. ನವೆಂಬರ್ ಕ್ರಾಂತಿಯಾಗುತ್ತೇ ನೀವೆ ನೋಡಿ, ಈ ದರಿದ್ರ ಸರ್ಕಾರ ತೊಲಗಲಿ ಎಂದರು.

ಮಾಜಿ ಸಚಿವರಾದ ಭೈರತಿ ಬಸವರಾಜ್, ಸುನೀಲ್ ಕುಮಾರ್, ಶಾಸಕರಾದ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕರಾದ ಬಸವರಾಜ್ ದಡೆಸುಗೂರು, ಪರಣ್ಣ ಮುನವಳ್ಳಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಚನ್ನಬಸವನಗೌಡ ಮತ್ತಿತರರಿದ್ದರು.