ಸಾರಾಂಶ
ಕಾರಟಗಿ:
ಕನಕಗಿರಿ ಕ್ಷೇತ್ರದಲ್ಲಿನ ನೀರಾವರಿ ಪ್ರದೇಶದಲ್ಲಿ ಇರುವ ಕ್ಯಾಂಪ್‌ಗಳನ್ನು ಕಂದಾಯ ಗ್ರಾಮನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ತಾಲೂಕಿನ ಮುಸ್ಟೂರು-ಡಗ್ಗಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃಧ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಜನರಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೆ ಕೆಲ ಕ್ಯಾಂಪ್‌ಗಳನ್ನು ಪರಿವರ್ತಿಸಲಾಗಿದೆ. ಇನ್ನು ಕೆಲವು ಜನಸಂಖ್ಯೆ ಆಧಾರದ ಮೇಲೆ ಮಾರ್ಪಾಡು ಮಾಡಲು ಸಿದ್ಧತೆ ನಡೆಸಿದೆ. ಹೀಗೆ ಮಾಡಿದರೆ ಮಾತ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲ ಕ್ಯಾಂಪ್‌ಗಳು ಹೆಚ್ಚಿದ್ದು ಅವುಗಳನ್ನು ಮುಖ್ಯವಾಹಿನಿಗೆ ತರಲಾಗುವುದು. ಕೆಲ ದೊಡ್ಡ ಗಾತ್ರದ ಕ್ಯಾಂಪ್‌ಗಳನ್ನು ಗ್ರಾಮಗಳನ್ನಾಗಿ ಮಾರ್ಪಡಿಸಿ ನಂತರ ಜನರಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.ನಮ್ಮ ಸರ್ಕಾರ ಬಡವರ ಪರವಿದೆ. ಹೀಗಾಗಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.
ಹಕ್ಕು ಪತ್ರ ವಿತರಣೆ:ಮುಸ್ಟೂರು ಗ್ರಾಮದ ವ್ಯಾಪ್ತಿಯ ಮೂಸ್ಟೂರು-ಡಗ್ಗಿ ಸರ್ವೇ ನಂ. ೨೦೭ ಹಾಗೂ ೨೧೦/೧ರಲ್ಲಿ ದಶಕಗಳಿಂದ ವಾಸವಿದ್ದ ೬೭ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಈಗ ಸರ್ವೇ ನಂ. ೨೦೬/೧ರಲ್ಲಿ ೫೬ ಕುಟುಂಬಗಳು ಹಲವ ದಶಕಗಳಿಂದ ವಾಸವಾಗಿದ್ದಾರೆ. ಆದರೆ ೧೯೯೯-೨೦೦೦ರಲ್ಲಿ ಅಂದಿನ ಅಧಿಕಾರಿಗಳು ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸುವ ಬದಲು ಪಹಣಿಯಲ್ಲಿ ಅರಣ್ಯ ಎಂದು ನಮೂದಿಸಿದ್ದರಿಂದ ಸಮಸ್ಯೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಜತೆ ಮಾತನಾಡಿ, ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಕಾನೂನು ತೊಡಕು ನಿವಾರಿಸಿ ಮುಂದಿನ ಕೆಲ ತಿಂಗಳಲ್ಲಿ ಇಲ್ಲಿನ ಜನರಿಗೂ ಸಹ ಹಕ್ಕುಪತ್ರ ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಮುಸ್ಟೂರು-ಮುಸ್ಟೂರು ಡಗ್ಗಿ, ಮುಸ್ಟೂರು-ಹೆಬ್ಬಾಳವರೆಗೆ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ, ಮುಸ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ನಿರ್ಮಾಣ, ಹೆಬ್ಬಾಳ-ಹೆಬ್ಬಾಳ ಕ್ಯಾಂಪ್ ರಸ್ತೆ ನಿರ್ಮಾಣ, ಢಣಾಪುರ ಗ್ರಾಮದಿಂದ ರಾಯಚೂರು-ಗಂಗಾವತಿ ರಸ್ತೆ ವರೆಗೆ ರಸ್ತೆ ನಿರ್ಮಾಣಕ್ಕೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ, ರೆಡ್ಡಿ ಶ್ರೀನಿವಾಸ, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಬುದಗುಂಪಾ, ತಹಸೀಲ್ದಾರ್ ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ, ಮುಸ್ಟೂರು ಗ್ರಾಪಂ ಅಧ್ಯಕ್ಷ ಬಿ. ಸುರೇಶ, ಪಿಡಿಒ ಸಾಯಿನಾಥ ಸೇರಿ ಇತರರಿದ್ದರು.