ಸಾರಾಂಶ
ಕುಂದಾಣ: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಮನೆಮನೆಗೂ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಮಾಹಿತಿ ಮನವರಿಕೆ ಮಾಡಿಕೊಡಬೇಕು ಎಂದು ಲೋಕಸಭಾ ಚುನಾವಣೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.
ಹೋಬಳಿಯ ಕೊಯಿರಾ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಶಿಫಾರಸ್ಸು ಪಡೆಯಲು ರಾಜ್ಯಾಧ್ಯಕ್ಷರು ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವರು. ಸುಧಾಕರ್ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಪಕ್ಷದಲ್ಲಿ ಸಾಮರ್ಥ್ಯ ಮತ್ತು ಪ್ರಬಲರನ್ನು ವರಿಷ್ಠರು ಗುರುತಿಸಿ ಟಿಕೆಟ್ ನೀಡಲಿದ್ದಾರೆ. ಯಾರೇ ಅಭ್ಯರ್ಥಿಯಾಗಲಿ ಅವರನ್ನು ಗೆಲ್ಲಿಸುವುದೇ ನಮ್ಮ ಜವಾಬ್ದಾರಿ. ಅದಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಆಕಾಂಕ್ಷಿ, ಮಾಜಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ೪೦% ಭ್ರಷ್ಟಾಚಾರದ ಕಟ್ಟುಕಥೆ ಹೇಳಿತ್ತೋ, ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಿಂದ ತಾರತಮ್ಯವಾಗಿದೆ ಎಂಬ ಹೊಸ ಕಟ್ಟುಕಥೆ ಸೃಷ್ಟಿಸಿದೆ. ಬಿಜೆಪಿ ಗೆಲ್ಲಲಿದೆ ಎಂದು ತಿಳಿದು ಕಾಂಗ್ರೆಸ್‌ಗೆ ದಿಕ್ಕು ತಪ್ಪಿದೆ. ಈ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರದಿಂದ ತಾರತಮ್ಯ ಎಂಬ ರಾಜಕೀಯ ಕಟ್ಟುಕಥೆ ಸೃಷ್ಟಿಸಲಾಗಿದೆ. ಈ ಮೂಲಕ ಜನರ ಮನಸ್ಸಿನಲ್ಲಿ ಪ್ರಶ್ನೆ ಮೂಡಿಸಿದ್ದಾರೆ. ಹಿಂದಿನ ಯುಪಿಎ ಸರ್ಕಾರ ನೀಡಿದ ಅನುದಾನಕ್ಕೆ ಹೋಲಿಸಿದರೆ ಈಗಿನ ಎನ್‌ಡಿಎ ಸರ್ಕಾರ ಮೂರು ಪಟ್ಟು ಹೆಚ್ಚು ಅನುದಾನ ರಾಜ್ಯಕ್ಕೆ ನೀಡಿದೆ ಎಂದು ಹೇಳಿದರು.
ಬಿಜೆಪಿ ಯಾವ ಮಟ್ಟಿಗೆ ಬೆಳೆದಿದೆ ಎಂದರೆ, ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೇ ೪೦೦ ಸ್ಥಾನಗಳು ಬಿಜೆಪಿಗೆ ಬರಲಿದೆ ಎಂದು ಹೇಳಿದ್ದಾರೆ. ದೇವನಹಳ್ಳಿಯಲ್ಲಿ ವಿಧಾನಸಭಾ ಚುನಾವಣೆ ಸೋಲಾದರೂ ೩೫ ಸಾವಿರವರೆಗೆ ಗಣನೀಯ ಮತಗಳು ಲಭಿಸಿವೆ. ಈ ಕ್ಷೇತ್ರದಲ್ಲಿ ೨೯೨ ಮತಗಟ್ಟೆಗಳಿವೆ. ಕಾರ್ಯಕರ್ತರು ಪ್ರತಿ ಬೂತ್ ಗೆಲ್ಲಬೇಕು. ದೇವನಹಳ್ಳಿ ಕ್ಷೇತ್ರದಲ್ಲಿ ೧ ಲಕ್ಷಕ್ಕೂ ಅಧಿಕ ಮತಗಳು ಬಿಜೆಪಿಗೆ ಬರುವಂತೆ ಕಾರ್ಯನಿರ್ವಹಿಸಬೇಕು. ಹಿಂದಿನ ಸರ್ಕಾರಗಳು ದೇಶವನ್ನು ಹಾಳು ಮಾಡಿದ್ದು, ಅದು ಪುನರಾವರ್ತನೆಯಾಗಬಾರದು. ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ದಕ್ಷ ಆಡಳಿತ ನೀಡಿದ್ದು, ಅವರೇ ಮತ್ತೆ ಅಧಿಕಾರಕ್ಕೆ ಬರಬೇಕು. ನನ್ನ ವಿರುದ್ಧ ಪಿತೂರಿ ನಡೆಯುತ್ತಲೇ ಇದ್ದು, ಅದರಿಂದಾಗಿಯೇ ಪಕ್ಷ ಬದಲಾವಣೆಯ ಗಾಳಿ ಮಾತು ಕೇಳಿಬಂದಿದೆ. ನಾನು ವಿಷಯಾಧಾರಿತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಜಿಲ್ಲಾಧ್ಯಾಕ್ಷ ಎ.ವಿ.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಸುಂದರೇಶ್, ಅಸಂಘಟಿತ ಕಾರ್ಮಿಕ ಪ್ರಕೋಷದ ಜಿಲ್ಲಾಧ್ಯಕ್ಷ ನೀಲೇರಿ ಅಂಬರೀಶ್ ಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನೀಲೇರಿ ಮಂಜುನಾಥ್, ಮುಖಂಡರಾದ ಎ.ಕೆ.ಪಿ.ನಾಗೇಶ್, ಅಶ್ವಥ್ ನಾರಾಯಣ್, ಕಡತನಮಲೆ ಸತೀಶ್, ಕೊಯಿರ ಬಾಬು, ವಿನಯ್ ಕುಮಾರ್, ಸುಬ್ಬಣ್ಣ, ವೇಣುಗೋಪಾಲ್, ಸಂಚಾಲಕರಾದ ಕಾಂತರಾಜು, ಸತೀಶ್ ಇತರರಿದ್ದರು. ಬಾಕ್ಸ್...........ಮಂದಗತಿಯಲ್ಲಿ ಎತ್ತಿನಹೊಳೆ ಕಾಮಗಾರಿ
ಕೊರೋನಾ ಹೊರತಾಗಿಯೂ ಹಿಂದಿನ ಬಿಜೆಪಿ ಸರ್ಕಾರದಿಂದ ಎತ್ತಿನಹೊಳೆ ಯೋಜನೆಗೆ 4.50 ಸಾವಿರ ಕೋಟಿ ರು.ಗಳಿಗೂ ಅಧಿಕ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಮತ್ತೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದಿದ್ದರೆ, ಡಿಸೆಂಬರ್ ವೇಳೆಗಾಗಲೇ, ಹಾಸನ, ಸಕಲೇಶಪುರಕ್ಕೆ ನೀರು ಬಂದಿರುತ್ತಿತ್ತು. ಗೌರಿಬಿದನೂರುವರೆಗೂ ನೀರು ತರಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಹೊಸ ಬಜೆಟ್ ನಲ್ಲೂ ಸ್ಪಷ್ಟವಾಗಿ ಎಷ್ಟು ಅನುದಾನ ಎಂದು ನಿಖರವಾಗಿ ಹೇಳಿಲ್ಲ. ಎಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಯೋಜನೆಯ ತೃತೀಯ ಸಂಸ್ಕರಣೆಗೂ ಒತ್ತು ನೀಡಿಲ್ಲ. ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.ಎತ್ತಿನಹೊಳೆ ಎನ್ನುವುದು ಇಡೀ ಬಯಲುಸೀಮೆಯ ಬೇಡಿಕೆ. ಕೇವಲ ಎತ್ತಿನಹೊಳೆ ಅಲ್ಲದೆ, ಶಾಶ್ವತ ನೀರಾವರಿ ಯೋಜನೆಗೆ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನುದಾನದ ಅಗತ್ಯವಿದೆ. ಈ ಬಗ್ಗೆ ನನಗೆ ಕನಸಿದ್ದು, ನೂರಕ್ಕೆ ನೂರು ಅನುದಾನ ತರುತ್ತೇನೆ ಎಂದು ತಿಳಿಸಿದರು.
೦೧ ಕುಂದಾಣ ೨೬ ಚಿತ್ರ ಸುದ್ದಿ : ಕುಂದಾಣ ಹೋಬಳಿಯ ಕೊಯಿರಾ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.