ಸಾರಾಂಶ
ದಾಬಸ್‍ಪೇಟೆ: ಸ್ಯಾಟಲೈಟ್ ನಗರ ರಿಂಗ್ ರಸ್ತೆ ನಿಮಾರ್ಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೋಂಪುರ ಹೋಬಳಿ ಹಾಗೂ ಮಾಗಡಿ ತಾಲೂಕಿನ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡು ಸುಮಾರು 6 ವರ್ಷಗಳಿಂದ ಪರಿಹಾರ ನೀಡುತ್ತಿಲ್ಲ, ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕೆಂದು ಒತ್ತಾಯಿಸಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹೊನ್ನಮ್ಮಗವಿ ಮಠದ ಶ್ರೀಗಳು ಸೇರಿದಂತೆ ನೂರಾರು ರೈತರು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತ ಮಾಲಾ ಯೋಜನೆಯಡಿ 2019ರಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಇದುವರೆಗೆ ಪರಿಹಾರ ನೀಡಿಲ್ಲ. ಭೂಸ್ವಾಧೀನದ ಹಣ ಬರಲಿದೆ ಎಂದು ರೈತರು ಸಾಲ ಮಾಡಿ ಮನೆ ನಿರ್ಮಿಸಿ, ಮದುವೆ ಮಾಡಿದ್ದಾರೆ. ಇದೀಗ ಸಾಲಕ್ಕೆ ಬಡ್ಡಿ ಕಟ್ಟಲು ಪರದಾಡುತ್ತಿದ್ದಾರೆ. ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಭೂಸ್ವಾಧೀನ ಕೈ ಬಿಡುವಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಕಂಬಾಳು ಉಮೇಶ್ ಮಾತನಾಡಿ, ತಾತ್ಕಾಲಿಕವಾಗಿ ಯೋಜನೆ ನಿಲ್ಲಿಸಿದ್ದು, ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ರೈತರಿಗೆ ಭೂಮಿಯೂ ಇಲ್ಲ, ಪರಿಹಾರವೂ ಸಿಗದಂತಾಗಿದೆ. ಸೂಕ್ತ ಪರಿಹಾರ ವಿತರಿಸಬೇಕು, ಇಲ್ಲವೇ ಭೂಮಿ ವಾಪಸ್ ನೀಡಲಿ, ಈ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲ ಸಿ.ಕೆ.ಮಹೇಂದ್ರ, ರೈತ ಮುಖಂಡರಾದ ಉಮೇಶ್, ದೈವಕುಮಾರ್, ಗಟ್ಟಿಬೈರಪ್ಪ, ರಮೇಶ್, ಗುರುಪ್ರಸಾದ್, ಸುರೇಶ್, ನಾಗೇಂದ್ರಕುಮಾರ್, ಪ್ರಕಾಶ್, ಶಿವರುದ್ರಪ್ಪ, ಬೋರಯ್ಯ, ನಾರಾಯಣಗೌಡ, ಶ್ರೀಧರ್, ಹೇಮಂತಕುಮಾರ್ ಇತರರು ಹಾಜರಿದ್ದರು.ಕೋಟ್...............
ಮಧ್ಯವರ್ತಿಗಳು ಕೆಲವೇ ಲಕ್ಷ ನೀಡಿ ರೈತರ ಭೂಮಿ ಖರೀದಿಸುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ಪರ ಮಾತನಾಡಿದರೆ ದಲ್ಲಾಳಿ ಪರ ಮಾತಾಡಿದಂತೆ. ಆದರೂ ಕೇಂದ್ರ ಹೆದ್ದಾರಿ, ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜತೆ ಈ ಯೋಜನೆಯ ಬಗ್ಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.-ವಿ.ಸೋಮಣ್ಣ, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು
ಪೋಟೋ 7 :ಸೋಂಪುರ ಹೋಬಳಿಯಲ್ಲಿ ಭೂಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಶೀಘ್ರವಾಗಿ ಪರಿಹಾರ ನೀಡುವಂತೆ ರೈತರು ಸಿದ್ದಗಂಗಾ ಮಠದ ಶ್ರೀಗಳ ನೇತೃತ್ವದಲ್ಲಿ ಸಚಿವ ಕೇಂದ್ರ ಸಚಿವ ವಿ.ಸೋಮಣ್ಣಗೆ ಮನವಿ ಪತ್ರ ನೀಡಿದರು.