ಸಾರಾಂಶ
ನಾವು ಬಳಸುತ್ತಿರುವ ಹಲವು ತಂತ್ರಜ್ಞಾನಗಳು ವಿದೇಶಿಯರ ನಿಯಂತ್ರಣದಲ್ಲಿದ್ದು, ಅದಕ್ಕೆ ಸಡ್ಡು ಹೊಡೆಯಬಲ್ಲ ಅನ್ವೇಷಣೆಗಳು ಭಾರತದಲ್ಲಿ ನಡೆಯಬೇಕಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ತಂತ್ರಜ್ಞಾನಗಳು ಸಂಗಮವಾಗಿರುವ ಕಾಲದಲ್ಲಿ ಅವನ್ನು ಧನಾತ್ಮಕವಾಗಿ ತೆಗೆದುಕೊಂಡು ಹೊಸ ಬದಲಾವಣೆಯ ಬಗ್ಗೆ ಯುವ ಸಮೂಹ ಚಿಂತಿಸಬೇಕು. ಹೊಸ ಆವಿಷ್ಕಾರದ ಮೂಲಕ ಬದಲಾವಣೆ ತರಬೇಕು ಎಂದು ಧಾರವಾಡ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯಸ್ಥ ಪ್ರೊ.ಎಸ್.ಎಂ. ಶಿವಪ್ರಸಾದ್ ಕರೆ ನೀಡಿದರು.ನಗರದ ಬನ್ನಿಮಂಟಪದಲ್ಲಿರುವ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿಯು ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನಾವು ಬಳಸುತ್ತಿರುವ ಹಲವು ತಂತ್ರಜ್ಞಾನಗಳು ವಿದೇಶಿಯರ ನಿಯಂತ್ರಣದಲ್ಲಿದ್ದು, ಅದಕ್ಕೆ ಸಡ್ಡು ಹೊಡೆಯಬಲ್ಲ ಅನ್ವೇಷಣೆಗಳು ಭಾರತದಲ್ಲಿ ನಡೆಯಬೇಕಿದೆ. ನಾವು ಬದಲಾಗದಿದ್ದರೆ ಯಂತ್ರಗಳ ಅಡಿಯಾಳು ಆಗಿ ಉಳಿಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಂಜಿನಿಯರ್, ವೈದ್ಯಕೀಯ ಹಾಗೂ ಸಮಾಜದ ಎಲ್ಲಾ ಪ್ರಮುಖ ಹುದ್ದೆಗಳು ವಿಜ್ಞಾನದ ಮುಂದೆ ಗೌಣವಾಗುತ್ತದೆ. ಪದವಿಯ ಅನುಭವದೊಂದಿಗೆ ಹೊಸ ಅದ್ಯಾಯಕ್ಕೆ ತೆರಳುವ ಮುನ್ನ ಈ ಕುರಿತ ಅರಿವು ಅಗತ್ಯ ಎಂದರು.ನ್ಯಾನೋ ಹಾಗೂ ಬಯೋ ಟೆಕ್ನಾಲಜಿ, ಕೃತಕ ಬುದ್ದಿಮತ್ತೆಯು ಜೊತೆಯಾಗಿ ಸಾಗುತ್ತಿರುವ ಕಾಲದಲ್ಲಿ ನಾವು ಬದುಕಿದ್ದೇವೆ. ರೋಬೋಟ್, ಚಾಟ್ ಜಿಪಿಟಿ ಅಭಿವೃದ್ಧಿಗೊಂಡು ಬಳಕೆಯಲ್ಲಿದ್ದು, ಅವು ಮುಂದಿನ 15 ವರ್ಷಗಳಲ್ಲಿ ಪ್ರಮುಖ ಕ್ಷೇತ್ರಗಳನ್ನು ಆವರಿಸಿಕೊಳ್ಳಲಿದೆ. ಇದರಿಂದ ಅನೇಕ ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಈ ಹೊಸ ತಂತ್ರಜ್ಞಾನಗಳು ಆತಂಕದ ನಡುವೆಯೂ ಮಾನವ ಶಕ್ತಿಯನ್ನು ಉತ್ತೇಜಿಸಲು ಸಹಾಯಕವಾಗಿದೆ. ಚಾಟ್ ಜಿಪಿಟಿಗಳ ಜ್ಞಾನವನ್ನೂ ಮೀರುವ ಜ್ಞಾನ ಸಂಪತ್ತು ನಮ್ಮದಾಗಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾಂತ್ರಿಕೃತ ಬೋಧನಾ ವಿಧಾನದ ಬದಲಾಗಿ ಎಲ್ಲರ ಹೃದಯ ಮುಟ್ಟುವ ವಿಷಯದ ಬಗ್ಗೆ ಕೇಂದ್ರೀಕರಿಸಿದರೆ ಉದ್ಯೋಗದಲ್ಲಿ ಬೆಳೆಯಲು ಸಾಧ್ಯ ಎಂದು ಅವರು ತಿಳಿಸಿದರು.ಪ್ರಸ್ತುತ ಸಮಾಜ ವೇಗ ಹಾಗೂ ಸ್ಥಿರತೆಯನ್ನು ಬೇಡುತ್ತದೆ. ಹಿರಿಯರ ಕಾಲದ ಜ್ಞಾನ ಸಾಕಾಗುವುದಿಲ್ಲ. ನಾವು ಅನ್ವೇಷಿಸುವ ಹೊಸ ವಿಚಾರವೇ ನಮ್ಮ ಸ್ಥಾನಮಾನವನ್ನು ನಿರ್ಧರಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆ ಪದವಿಯನ್ನಷ್ಟೇ ನೀಡುತ್ತದೆ. ಯಾವ ಕ್ಷಣಕ್ಕೆ, ಹೇಗೆ ಸಿದ್ಧರಾಗಿರಬೇಕೆಂಬುದನ್ನು ತಿಳಿಸುತ್ತಿಲ್ಲ. ಮುಂದಿನ ಪೀಳಿಗೆ ಈ ತಪ್ಪನ್ನು ಮಾಡಬಾರದು ಎಂದರು.ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ಕುಲಪತಿ ಡಾ. ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ. ಮಂಜುನಾಥ, ಡೀನ್ ಡಾ.ಎಂ.ಎನ್. ಸುಮಾ, ಜೆಎಸ್ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಚ್. ಬಸವಣ್ಣಗೌಡಪ್ಪ, ಉಪ ಪ್ರಾಂಶುಪಾಲ ಡಾ. ಪ್ರವೀಣ್ ಕುಲಕರ್ಣಿ, ವಿಶಾಲ್ ಕುಮಾರ್ ಗುಪ್ತ ಮೊದಲಾದವರು ಇದ್ದರು.---ಬಾಕ್ಸ್...321 ವಿದ್ಯಾರ್ಥಿಗಳಿಗೆ ಪ್ರಮಾಣಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ 151 ಪದವಿ ಮತ್ತು 170 ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 321 ವಿದ್ಯಾರ್ಥಿಗಳು ಪ್ರಮಾಣಪತ್ರ ಸ್ವೀಕರಿಸಿದರು. ಇವರಲ್ಲಿ 23 ಪ್ರತಿಭಾನ್ವಿತ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಮೆರಿಟೋರಿಯಸ್ ಪ್ರಮಾಣಪತ್ರ ಸ್ವೀಕರಿಸಿದರು.