ಕುಕ್ಕರ್‌ ಸ್ಫೋಟಿಸಿ ಶಾರ್ಟ್‌ಸರ್ಕಿಟ್‌:ಬೆಂಕಿ ಹೊತ್ತಿ ಯುವಕರಿಗೆ ಗಾಯ

| Published : Aug 14 2024, 12:58 AM IST

ಕುಕ್ಕರ್‌ ಸ್ಫೋಟಿಸಿ ಶಾರ್ಟ್‌ಸರ್ಕಿಟ್‌:ಬೆಂಕಿ ಹೊತ್ತಿ ಯುವಕರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕುಕ್ಕರ್‌ ಸ್ಫೋಟದಿಂದ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಯುವಕರು ಗಾಯಗೊಂಡಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಕ್ಕರ್‌ ಸ್ಫೋಟದಿಂದ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜೆ.ಪಿ.ನಗರದ 24ನೇ ಮುಖ್ಯರಸ್ತೆ ನಿವಾಸಿಗಳಾದ ಮೋಸಿನ್‌(23) ಮತ್ತು ಖಾದರ್‌ ಖಾನ್‌(27) ಗಾಯಗೊಂಡವರು. ಸದ್ಯ ಇಬ್ಬರು ಗಾಯಾಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮೂಲದ ಮೋಸಿನ್‌ ಮತ್ತು ಖಾದರ್‌ ಖಾನ್‌ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೇರ್‌ ಸಲೂನ್‌ ಶಾಪ್‌ನಲ್ಲಿ ಕೆಲಸ ಮಾಡುವ ಈ ಇಬ್ಬರು ಬಾಡಿಗೆ ರೂಮ್‌ನಲ್ಲಿ ವಾಸವಿದ್ದಾರೆ. ಮಂಗಳವಾರ ಸೆಲೂನ್‌ ಶಾಪ್‌ಗೆ ರಜೆ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 11ಕ್ಕೆ ಎದ್ದು ತಿಂಡಿ ಸಿದ್ಧಪಡಿಸಲು ಮುಂದಾಗಿದ್ದಾರೆ.

ಅನ್ನ ಮಾಡುವಾಗ ಕುಕ್ಕರ್‌ ಸ್ಫೋಟ:

ಗ್ಯಾಸ್‌ ಸ್ಟೌವ್‌ ಆನ್ ಮಾಡಿ ಅನ್ನ ಮಾಡಲು ಕುಕ್ಕರ್‌ನಲ್ಲಿ ಅಕ್ಕಿ ಇರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕುಕ್ಕರ್‌ ಸ್ಫೋಟಗೊಂಡಿದ್ದು, ಸ್ಫೋಟದ ರಭಸಕ್ಕೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ರೂಮ್‌ನಲ್ಲಿ ಯುವಕರ ಚೀರಾಟ ಕೇಳಿ ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು, ಗಾಯಾಳು ಯುವಕರಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಕುಕ್ಕರ್‌ ಮಾತ್ರ ಸ್ಫೋಟಗೊಂಡಿದ್ದರಿಂದ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಿದೆ. ಒಂದು ವೇಳೆ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿದ್ದರೆ ಭಾರೀ ಪ್ರಮಾಣದ ಅಪಾಯ ಉಂಟಾಗುತ್ತಿತ್ತು. ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.